ಬೆಂಗಳೂರು, ಸೆ.04: ಸರ್ಕಾರಿ ಅಧಿಕಾರಿಗಳು, ಪೊಲೀಸರು, ಪ್ರಭಾವಿಗಳ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುವುದು, ಸುಳ್ಳು ಸುದ್ದಿ ಹಬ್ಬಿಸುವಂತಹ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗಿವೆ(Fake Facebook Account). ಆದರೆ ಇಲ್ಲಿ ಕೆಲ ಸೈಬರ್ ಚೋರರು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Governor Thawar Chand Gehlot) ಅವರ ಹೆಸರು ಬಳಸಿಕೊಂಡು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಫೋಟೋ, ಹೆಸರು ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಸದ್ಯ ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ದಾಖಲಿಸಿದ್ದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯಾರೂ ಅಪರಿಚಿತ ವ್ಯಕ್ತಿ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ಸಲ್ಲಿಸಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಸೈಬರ್ ಪೊಲೀಸರು ಖಾತೆಯನ್ನು ಕ್ಲೋಸ್ ಮಾಡಿಸಿದ್ದು ಆರೋಪಿಗಳಿಗಾಗಿ ತಲಾಶ್ ಶುರು ಮಾಡಿದ್ದಾರೆ. ಗವರ್ನರ್ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ಉದ್ದೇಶವೇನು? ಈ ನಕಲಿ ಖಾತೆಯಿಂದ ಯಾರಿಗಾದರೂ ಸಮಸ್ಯೆಯಾಗಿದೆಯಾ? ಎಂಬ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಳಗಾವಿ: ಲೋಕಾಯುಕ್ತ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್, ಮತ್ತೋರ್ವ ಎಸ್ಕೇಪ್
ವಜೂಭಾಯಿ ವಾಲಾ ಅವರ ಬಳಿಕ ಕರ್ನಾಟಕದ 19ನೇ ರಾಜ್ಯಪಾಲರಾಗಿ ನೇಮಕಗೊಂಡ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು 2021 ರ ಜುಲೈ 11 ರಂದು ಅಧಿಕಾರ ವಹಿಸಿಕೊಂಡರು. ಎನ್‌ಡಿಎ ಸರಕಾರದಲ್ಲಿ 2014 ರಿಂದ 2021 ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಗ್ಡಾದಲ್ಲಿ 1948ರ ಮೇ 18ರಂದು ದಲಿತ ಕುಟುಂಬದಲ್ಲಿ ಜನಿಸಿದ ಗೆಹ್ಲೋಟ್, ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದರು. ಡಾ. ಬಿಆರ್ ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಗೌರವಿಸಿದೆ.
1977-1980ರವರೆಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿದ್ದರು. 1985ರಲ್ಲಿ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದರು. ಮಧ್ಯಪ್ರದೇಶ ವಿಧಾನಸಭೆಗೆ 1980, 1990, 1993ರಲ್ಲಿ ಚುನಾಯಿತರಾಗಿದ್ದರು. 1986 ರಿಂದ 1987ರವರೆಗೆ ಮಧ್ಯಪ್ರದೇಶದ ಪಕ್ಷದ ಅಧ್ಯಕ್ಷರಾಗಿದ್ದರು. 1996 ರಿಂದ 2009ರವರೆಗೂ ಮಧ್ಯಪ್ರದೇಶದ ಶಾಜಾಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:54 am, Mon, 4 September 23