ನಕಲಿ ವೋಟರ್ ಐಡಿ: ಸಚಿವ ಭೈರತಿ ಸುರೇಶ್ ವಿರುದ್ಧ ಎನ್ ರವಿಕುಮಾರ್ ವಾಗ್ದಾಳಿ
ರಾಜ್ಯದಲ್ಲಿ ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಸಚಿವ ಭೈರತಿ ಸುರೇಶ್ ಆಪ್ತನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಕುರಿತಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದು, ಈ ಸರ್ಕಾರದಲ್ಲಿ ಒಬ್ಬ ಸಚಿವರಿಗಿಂತ ಮತ್ತೊಬ್ಬರು ಕುಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸಚಿವ ಭೈರತಿ ಸುರೇಶ್ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 21: ಈ ಸರ್ಕಾರದಲ್ಲಿ ಒಬ್ಬ ಸಚಿವರಿಗಿಂತ ಮತ್ತೊಬ್ಬರು ಕುಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸಚಿವ ಭೈರತಿ ಸುರೇಶ್ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ (N Ravikumar) ಹೇಳಿದ್ದಾರೆ. ಹೆಬ್ಬಾಳದಲ್ಲಿ ನಕಲಿ ವೋಟರ್ ಐಡಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಭೈರತಿ ಸುರೇಶ್ ಹೇಗೆ ಗೆದ್ದು ಬಂದರು ಎನ್ನುವುದು ಈಗ ಗೊತ್ತಾಗುತ್ತಿದೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ನಕಲಿ ವೋಟರ್ ಐಡಿ ಸಿಕ್ಕಿದೆ. ಸಿಸಿಬಿ ರೈಡ್ ಮಾಡಿದಾಗ ಎಲ್ಲಾ ಹೊರಗೆ ಬಂದಿದೆ. ಮೌನೇಶ್ ಕುಮಾರ್ ಎಂಬ ಕಿಂಗ್ ಪಿನ್ ಕಚೇರಿ ದಾಳಿಯಲ್ಲಿ ಎಲ್ಲವೂ ಸಿಕ್ಕಿದೆ. ಇದಕ್ಕೆ ಭೈರತಿ ಸುರೇಶ್ ಕಾರಣ. ಮೌನೇಶ್ ಕಚೇರಿ ದಾಳಿ ಮಾಡಿದಾಗ ಮೌನೇಶ್ ಮಗನ ಜೊತೆಯಲ್ಲಿ, ಭೈರತಿ ಸುರೇಶ್ ಇರುವ ಫೋಟೋ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನೇಕಾರರಿಗೆ ದಸರಾ ಉಡುಗೊರೆ ನೀಡಿದ ಸರ್ಕಾರ: ಉಚಿತ ವಿದ್ಯುತ್ ಘೋಷಣೆ: ಸಚಿವ ಶಿವಾನಂದ ಪಾಟೀಲ್
ರಾಜ್ಯದಲ್ಲಿ ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆ ಬರಲಿದೆ. ಲಕ್ಷಾಂತರ ವೋಟರ್ ಐಡಿ ಕ್ರಿಯೇಟ್ ಆಗಲಿದೆ, ಕೂಡಲೇ ತನಿಖೆ ನಡೆಸಬೇಕು ಎಂದು ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಸಚಿವರ ಆಪ್ತರ ವಿರುದ್ಧ ಕೇಸ್ ದಾಖಲು
ನಕಲಿ ವೋಟರ್, ಆಧಾರ್, ಪಾನ್ ಕಾರ್ಡ್ ಸೃಷ್ಟಿಸಿದ ಆರೋಪದ ಮೇಲೆ ಸಚಿವರ ಆಪ್ತರ ವಿರುದ್ಧ ಕೇಸ್ ದಾಖಲಾಗಿದೆ. ಅಸಲಿ ವೋಟರ್ ಐಡಿ ಎಂದು ಮೂವರು ಆರೋಪಿಗಳು ಹಣ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡ್ತಿದ್ರಂತೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಚಿವ ಭೈರತಿ ಸುರೇಶ್ ಅವರ ಮೂವರು ಆಪ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸ್ತಿದ್ದ ಕಂಪ್ಯೂಟರ್ ಸೇರಿ ಹಲವು ವಸ್ತುಗಳು ಜಪ್ತಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಆಪರೇಷನ್ ಹಸ್ತ ಆಗಲ್ಲ, ಕಮಲ ಆಗುತ್ತೆ ಕಾದುನೋಡಿ: ಮಾಜಿ ಸಚಿವ ಮುರುಗೇಶ್ ನಿರಾಣಿ
ಮೌನೇಶ್, ರಾಘವೇಂದ್ರ, ಭಗತ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸದೇ ಸುಮ್ಮನಾಗಿರುವ ಆರೋಪ ಕೇಳಿಬಂದಿದೆ. ಸಚಿವರ ಕೃಪೆಯಿಂದ ಬಂಧನ ಮಾಡಿಲ್ಲ. ನೆಪಕ್ಕಷ್ಟೇ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:10 pm, Sat, 21 October 23