ಬೆಂಗಳೂರು, ಡಿ.10: ಬೆಂಗಳೂರು ನಗರ ಜಿಲ್ಲೆಯ ಥಣಿಸಂದ್ರದಲ್ಲಿ ಕಳೆದ 30 ವರ್ಷಗಳ ಹಿಂದೆ ರೈತರ ಜಾನುವಾರುಗಳಿಗೆ ರೋಗರುಜಿಮಗಳು ಬಂದರೆ ತೋರಿಸಲು ಸುಲಭವಾಗಲಿ ಅಂತ ಥಣಿಸಂದ್ರ ಗ್ರಾಮದಲ್ಲಿ ಪಶು ವೈದ್ಯ ಆಸ್ಪತ್ರೆ (Veterinary Hospital) ಸ್ಥಾಪಿಸಲಾಗಿತ್ತು. ಈ ಆಸ್ಪತ್ರೆ ಥಣಿಸಂದ್ರ ಅಷ್ಟೇ ಅಲ್ಲದೇ ರಾಚೇನಹಳ್ಳಿ, ಮರಯ್ಯನಪಾಳ್ಯ, ಶ್ರೀರಾಮಪುರ, ದಾಸರಹಳ್ಳಿ, ಹೆಗಡೆ ನಗರ, ಅಶ್ಚಥ್ ನಗರ, ಸೇರಿದಂತೆ ಸಾರಾಯಿ ಪಾಳ್ಯ ಗ್ರಾಮಗಳ ರೈತರ ಜಾನುವಾರುಗಳನ್ನು ತಂದು ಇಲ್ಲಿಗೆ ತೋರಿಸುತ್ತಿದ್ದರು. ಆದರೆ ಇದೀಗ ಏಕಾಏಕಿ ಆಸ್ಪತ್ರೆ ಸ್ಥಳಾಂತರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಈ ಪಶು ಆಸ್ಪತ್ರೆ ಸ್ಥಳಾಂತರ ಪರಿಣಾಮದಿಂದಾಗಿ ಥಣಿಸಂದ್ರ ಗ್ರಾಮದಲ್ಲೆ 2 ಸಾವಿರಕ್ಕೂ ಅಧಿಕ ಹಸು, ಎಮ್ಮೆ ಹಾಗೂ ಕುರಿ, ಮೇಕೆಗಳು ಹಾಗೂ ಕೋಳಿಗಳಿಗೆ ಎನಾದರು ಆರೋಗ್ಯದಲ್ಲಿ ಸಮಸ್ಯೆಯಾದರೆ ಹೆಬ್ಬಾಳಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ ಹೆಬ್ಬಾಳಕ್ಕೆ ಜಾನುವಾರುಗಳನ್ನ ತೆಗೆದುಕೊಂಡು ಹೋಗಬೇಕೆಂದರೆ 500 ರೂಪಾಯಿ ಕೊಟ್ಟು ಬಾಡಿಗೆ ವಾಹನ ಮಾಡಿಕೊಂಡು ಹೋಗಬೇಕು. ತುರ್ತು ಸಂದರ್ಭದಲ್ಲಿ ಖಾಸಗಿ ಪಶು ವೈದ್ಯರನ್ನ ಕರೆಯಿಸಿದರೆ ಅವರು ಕೂಡ ಹೆಚ್ಚಿನ ದುಡ್ಡು ಕೇಳುತ್ತಾರೆ. ಇಲ್ಲೆ ಆಸ್ಪತ್ರೆಯಿದ್ದರೆ ಅನಕೂಲ ಆಗುತ್ತೆ, ನಾವು ಪ್ರಾಣಿಗಳನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವವರು ಜಾನುವಾರುಗಳಿಗೆ ಏನಾದರು ಆದರೆ ಎಲ್ಲಿ ತೋರಿಸೋದು ಈ ಹಿಂದೆ ಇದ್ದಂತೆ ಪಶು ಆಸ್ಪತ್ರೆಯನ್ನ ಮುಂದುವರೆಸುವಂತೆ ರೈತ ಮಹಿಳೆ ಆಗ್ರಹಿಸುತ್ತಿದ್ದಾರೆ. ಇತ್ತ ಸರ್ಕಾರದ ಈ ನಡೆಗೆ ಸಾಮಾಜಿಕ ಹೋರಾಟಗಾರರು ಕೂಡ ಆಕ್ರೋಶ ಹೊರಹಾಕಿದ್ದು, ಎಲ್ಲ ಪಶು ಆಸ್ಪತ್ರೆಗಳಲ್ಲಿ ಸರಿಯಾಗಿ ವೈದ್ಯರ ನೇಮಕಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಸ್ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್ಐಎ ದಾಳಿ: ಯಾರು ಈ ಅಬ್ಬಾಸ್ ಅಲಿ?
ಒಟ್ಟಿನಲ್ಲಿ ಹತ್ತಾರು ಹಳ್ಳಿಯ ಜಾನುವಾರುಗಳಿಗೆ ಆಸರೆ ಆಗಿದ್ದ ಪಶು ಆಸ್ಪತ್ರೆಯನ್ನ ಹೀಗೆ ಸ್ಥಳಾಂತರ ಮಾಡಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ವೇಳೆ ಈ ಹಿಂದಿನಂತೆ ಆಸ್ಪತ್ರೆಯನ್ನ ಮುಂದುವರೆಸದಿದ್ದರೆ ಗ್ರಾಮಸ್ಥರು ತಮ್ಮ ಜಾನುವಾರುಗಳ ಸಹಿತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ರೈತರ ತಾಳ್ಮೆ ಕಟ್ಟೆ ಒಡೆಯುವ ಮೊದಲು ಸರ್ಕಾರ ಇಲ್ಲಿ ಆಸ್ಪತ್ರೆಗೆ ವೈದ್ಯರ ನೇಮಕ ಮಾಡಿ ಆಸ್ಪತ್ರೆ ಮುಂದುವರೆಸಲಿ ಅನ್ನೋದು ನಮ್ಮ ಆಶಯ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ