ಬೆಂಗಳೂರು ಹಿಟ್​ ಆ್ಯಂಡ್​ ರನ್​ ಪ್ರಕರಣವನ್ನು ಪೊಲೀಸರು ಭೇದಿಸಿದ್ದೇ ರೋಚಕ

| Updated By: ವಿವೇಕ ಬಿರಾದಾರ

Updated on: Nov 18, 2024 | 3:13 PM

ಬೆಂಗಳೂರಿನಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 20 ವರ್ಷದ ಯುವಕ ಶಶಿಕುಮಾರ್ ಮೃತಪಟ್ಟಿದ್ದಾನೆ. ಅಪಘಾತ ಎಸಗಿ ಪರಾರಿಯಾಗಿದ್ದ ಆರೋಪಿ ಕಾಜಾ ಮೊಹಿದ್ದಿನ್ ಅವರನ್ನು ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬಂಧಿಸಿದ್ದಾರೆ. ಕಾರಿನ ಸ್ಟಿಕರ್ ಮತ್ತು ವಿಶೇಷ ಗುರುತುಗಳನ್ನು ಆಧರಿಸಿ ಪೊಲೀಸರು 200 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ಬೆಂಗಳೂರು ಹಿಟ್​ ಆ್ಯಂಡ್​ ರನ್​ ಪ್ರಕರಣವನ್ನು ಪೊಲೀಸರು ಭೇದಿಸಿದ್ದೇ ರೋಚಕ
ಅಪಘಾತಕ್ಕೆ ಬಳಿಸಿದ್ದ ಕಾರು
Follow us on

ಬೆಂಗಳೂರು, ನವೆಂಬರ್​ 18: ಬೆಂಗಳೂರು (Bengaluru) ನಗರದಲ್ಲಿ ಮತ್ತೊಂದು ಹಿಟ್​ ಆ್ಯಂಡ್​ ರನ್ (Hit and Run)​​ ಪ್ರಕರಣ ನಡೆದಿದೆ. ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ಬುಧವಾರ (ನ.13) ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದ ಹಿಟ್ ಆ್ಯಂಡ್​ ರನ್​ಗೆ ಶಶಿಕುಮಾರ್ (20) ಎಂಬ ಯುವಕ ಮೃತಪಟ್ಟಿದ್ದಾನೆ. ಅಪಘಾತ ಎಸಗಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಕಾಜಾ ಮೊಹಿದ್ದಿನ್​​ನನ್ನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದು ಏನು?

ಶಶಿಕುಮಾರ್ ಮಧ್ಯರಾತ್ರಿ ವೇಗವಾಗಿ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ, ತನಗೆ ನೇರವಾಗಿ ಬರುತ್ತಿದ್ದ ಕಾರು ನೋಡಿ ಗಾಬರಿಗೊಂಡಿದ್ದಾನೆ. ಆಗ, ಬೈಕ್​​ ಸ್ಕಿಡ್​ ಆಗಿದೆ. ಶಶಿಕುಮಾರ್​ ಕಳೆಗೆ ಬಿದ್ದಿದೆ. ಬೈಕ್ 100 ಮೀಟರ್ ನಷ್ಟು ದೂರ ಹೋಗಿದೆ. ಇದನ್ನು, ಕಂಡ ಚಾಲಕ ಕಾರು ನಿಲ್ಲಿಸಿದ್ದಾನೆ. ಶಶಿಕುಮಾರ್​ ಕಾರಿನ ಮುಂದೆ ಬಂದು ಬಿದ್ದಿದ್ದಾನೆ. ಬಳಿಕ, ಕಾರು ಚಾಲಕ ಶಶಿಕುಮಾರ್ ಮೇಲೆ ಕಾರು ಹರಿಸಿಕೊಂಡು ಹೋಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತ ಎಸಗಿ ಕಾರು ಚಾಲಕ ಚನ್ನರಾಯಪಟ್ಟಣಕ್ಕೆ ತೆರಳಿದ್ದಾನೆ.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ರಸ್ತೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ, ಕಾರು ಮತ್ತು ಆರೋಪಿ ಕಾಜಾ ಮೊಹಿದ್ದಿನ್ ಗುರುತು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿ ಆರೋಪಿ ಕಾಜಾ ಮೊಹಿದ್ದಿನ್​​ನನ್ನು ವಶಕ್ಕೆ ಪಡೆದಿದ್ದಾರೆ.

ಕಾರು ಪತ್ತೆಹಚ್ಚಿದ್ದೇ ರೋಚಕ

ಮೊದಲು ಪೊಲೀಸರಿಗೆ ಕಾರಿನ‌ ನಂಬರ್ ಗೊತ್ತಾಗಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲೂ ಕಾಣಿಸಿರಲಿಲ್ಲ. ಹೀಗಾಗಿ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಕಾರಿನ ಹಿಂದೆ ಹಚ್ಚಿದ್ದ ಸ್ಟಿಕರ್​ ಆಧರಿಸಿ ಬೆನ್ನುಹತ್ತಿದ್ದಾರೆ. ಪೊಲೀಸರು ಮೊದಲು ಕಾರಿನ ಒಂದು ಬಾಗಿಲಗೆ ಮಾತ್ರ ಸೇಫ್ಟಿ ಗಾರ್ಡ್ ಇರುವುದನ್ನು​ ತಿಳಿದುಕೊಂಡಿದ್ದಾರೆ. ನಂತರ,ಕಾರಿನ ಬಲಭಾಗದ ಮುಂದಿನ ಚಕ್ರಕ್ಕೆ ಮಾತ್ರ ವ್ಹೀಲ್ ಕ್ಯಾಪ್ ಇತ್ತು. ಹಿಂಬದಿ ಚಕ್ರಕ್ಕೆ ವ್ಹೀಲ್ ಕ್ಯಾಪ್ ಇರಲಿಲ್ಲ. ಕಾರಿನ ಗ್ಲಾಸಿನ ಮೇಲೆ ಸನ್ ಗಾರ್ಡ್ ಇತ್ತು ಅದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಮಾಹಿತಿ ಮೇಲೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಕಾರಿನ ಹಿಂಬದಿ‌ ಗಾಜಿನ ಮೇಲಿನ M S ಸ್ಟಿಕ್ಕರ್ ಇದೆ. ಇದು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಪೊಲೀಸರು ಹುಡುಕಾಟ ಚುರುಕುಗೊಳಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಪಾರ್ಲೆಜಿ‌ ಟೋಲ್​ವರೆಗೆ 200 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ, ಒಂದು ಕ್ಯಾಮೆರಾದಲ್ಲಿ ಕಾರು ಕಂಡಿದೆ. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಕಾಜಾ ಮೊಹಿದ್ದಿನ್​​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:06 pm, Mon, 18 November 24