ಬೆಂಗಳೂರು, ಸೆಪ್ಟೆಂಬರ್ 10: ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದ ಶಕ್ತಿಯೋಜನೆ ಜಾರಿಗೆ ಬಂದಾಗಿನಿಂದ ಖಾಸಗಿ ಸಾರಿಗೆ ಒಕ್ಕೂಟ ಕಿಡಿಕಾರುತ್ತ ಬಂದಿತ್ತು. ಇದೀಗ ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬಂದ್ಗೆ ಕರೆ ನೀಡಿದ್ದಾರೆ. ಇವತ್ತು ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್ ನಡೆಸಲು ಒಕ್ಕೂಟ ಸಜ್ಜಾಗಿದೆ. ಹಾಗಾಗಿ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಬಂದ್ಗೆ ಕರೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಅದರಲ್ಲಿಯೂ ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎಸಿಪಿ, ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ಶಾಂತಿನಗರ, ಮೌರ್ಯ ಸರ್ಕಲ್, ಕೋರಮಂಗಲ, ಫ್ರೀಡಂಪಾರ್ಕ್, ಶಿವಾನಂದ ಸರ್ಕಲ್, ಕಲಾಸಿಪಾಳ್ಯ, ಪೀಣ್ಯ, ಮೈಸೂರು ರಸ್ತೆ ಸ್ಯಾಟ್ಲೈಟ್ ಬಸ್ ನಿಲ್ದಾಣ, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ, ಕೆಂಗೇರಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ.
ಇನ್ ಪ್ಯಾಂಟರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕೈಗೊಳ್ಳಲಿದ್ದೇವೆ. ಕೆಎಸ್.ಆರ್.ಪಿ, ಸಿಎಆರ್ ಸೇರಿದಂತೆ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಸೋಮವಾರ ಬೆಂಗಳೂರು ಬಂದ್, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿ ಟ್ರಿಪ್
ನಗರದಲ್ಲಿ ಯಾವುದೇ ರ‍್ಯಾಲಿಗೆ ಅವಕಾಶವಿಲ್ಲ. ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Sun, 10 September 23