ಭ್ರೂಣ ಲಿಂಗ ಪತ್ತೆ: ಸ್ಕ್ಯಾನಿಂಗ್​ ಸೆಂಟರ್​ ಮಾಹಿತಿ ಸಂಗ್ರಹಕ್ಕೆ ಡೆಡ್​ಲೈನ್​ ನಿಗದಿ

ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಗಳು ರಾಜ್ಯದ ಹಲವೆಡೆ ಸುದ್ದಿ ಮಾಡುತ್ತಿವೆ. ಸದ್ಯ ಈ ವಿಚಾರವಾಗಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲಾ ಸ್ಕ್ಯಾನಿಂಗ್​ಸೆಂಟರ್​ಗಳ ಮಾಹಿತಿ ಸಂಗ್ರಹಕ್ಕೆ ಪ್ಲಾನ್​ ಮಾಡಲಾಗಿದೆ. ಡಿಸೆಂಬರ್​ 30ರೊಳಗೆ ರಾಜ್ಯದ DHO, CHOಗಳಿಗೆ ಮಾಹಿತಿ ಸಂಗ್ರಹಕ್ಕೆ ಡೆಡ್​ಲೈನ್​ ನೀಡಲಾಗಿದೆ. ಇದರಿಂದ ಭ್ರೂಣ ಲಿಂಗ ಪತ್ತೆ ಮಾಡಿದವರಿಗೆ ನಡುಕ ಶುರುವಾಗಿದೆ.

ಭ್ರೂಣ ಲಿಂಗ ಪತ್ತೆ: ಸ್ಕ್ಯಾನಿಂಗ್​ ಸೆಂಟರ್​ ಮಾಹಿತಿ ಸಂಗ್ರಹಕ್ಕೆ ಡೆಡ್​ಲೈನ್​ ನಿಗದಿ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Dec 06, 2023 | 11:22 AM

ಬೆಂಗಳೂರು, ಡಿಸೆಂಬರ್​​​​ 06: ಭ್ರೂಣ ಲಿಂಗ ಪತ್ತೆ (Female Foeticide) ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲಾ ಸ್ಕ್ಯಾನಿಂಗ್​ಸೆಂಟರ್​ಗಳ ಮಾಹಿತಿ ಸಂಗ್ರಹಕ್ಕೆ ಪ್ಲಾನ್​ ಮಾಡಲಾಗಿದೆ. ಡಿಸೆಂಬರ್​ 30ರೊಳಗೆ ರಾಜ್ಯದ DHO, CHOಗಳಿಗೆ ಮಾಹಿತಿ ಸಂಗ್ರಹಕ್ಕೆ ಡೆಡ್​ಲೈನ್​ ನೀಡಲಾಗಿದೆ. 6 ಸಾವಿರ ಸ್ಕ್ಯಾನಿಂಗ್​ ಸೆಂಟರ್​ಗಳು, ಕ್ಲಿನಿಕ್​ಗಳ ತಪಾಸಣೆಗೆ ಸೂಚನೆ ನೀಡಲಾಗಿದೆ. ಪೋಷಕರು, ತಾಯಿ ಹೊರತು ಯಾರು ಇದ್ದರು ಅನ್ನೋದರ ಬಗ್ಗೆ ಸ್ಕ್ಯಾನಿಂಗ್​ ಸೆಂಟರ್​ಗಳ ಸಿಸಿಟಿವಿ ಮೂಲಕ ಪರಿಶೀಲನೆಗೂ ಸೂಚಿಸಲಾಗಿದೆ. ಸದ್ಯ  ಇಲಾಖೆ ನಿರ್ಧಾರದಿಂದ ಭ್ರೂಣ ಲಿಂಗ ಪತ್ತೆ ಮಾಡಿದವರಿಗೆ ನಡುಕ ಶುರುವಾಗಿದೆ.

ಹೆಣ್ಣು ಭ್ರೂಣ ಹತ್ಯೆ: ಸಾರ್ವಜನಿಕರ ಸಹಕಾರ ಬೇಕು: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸಿಐಡಿಗೆ ನಮ್ಮ ಮಾಹಿತಿ ಕೊಡ್ತಿದ್ದೇವೆ, ಅವರು ತನಿಖೆ ಮಾಡುತ್ತಿದ್ದಾರೆ. ತನಿಖಾಧಿಕಾರಿಗಳಿಗೆ ಅನೇಕ ಜನರು ಕೂಡ ಮಾಹಿತಿ ಕೊಡ್ತಿದ್ದಾರೆ. ಪೊಲೀಸ್ ಇಲಾಖೆ, ಸಾರ್ವಜನಿಕರು‌ ಎಲ್ಲರ ಸಹಕಾರ ಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯಬೇಕಿದೆ ಎಂದು ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಅಲರ್ಟ್

ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಕೂಡ ಅಲರ್ಟ್ ಆಗಿದ್ದು, ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿಗಾ ಇಡಲಾಗಿದೆ. ಎಲ್ಲ ಸಿಬ್ಬಂದಿಗೆ ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅರಿವು ನೀಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಅವರು, ಇಲ್ಲಿ ಅಂಥ ಯಾವುದೇ ಪ್ರಕರಣ ಕಂಡು ಬಂದಿಲ್ಲ. ದಿನಕ್ಕೆ ನಮ್ಮಲ್ಲಿ 70 ಸ್ಕ್ಯಾನಿಂಗ್ ಆಗುತ್ತವೆ. ಹಿರಿಯ ರೇಡಿಯಾಲಜಿಸ್ಟ್ ಸ್ಕ್ಯಾನ್ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಹುಷಾರ್… ಭ್ರೂಣಹತ್ಯೆಗೆ ಬ್ರೇಕ್​ ಹಾಕಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲು ಮುಂದಾದ ಪೊಲೀಸ್​ ಇಲಾಖೆ

ಹಲವಾರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಅಂಥ ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ. ಡಾ. ಕುಮಾರಯ್ಯ ಎತ್ತಿನಮಠ ಇಲ್ಲಿನ ರೇಡಿಯಾಲಿಜಿಸ್ಟ್ ಅವರು ಜಿಲ್ಲಾ ತಂಡದಲ್ಲಿ ಸದಸ್ಯರೂ ಹೌದು. ಡಾ. ಎತ್ತಿನಮಠ, ಭ್ರೂಣ ಲಿಂಗ ಪತ್ತೆ ವಿರೋಧಿ ತಂಡದ ಸದಸ್ಯರು. ಹೀಗಾಗಿ ಅವರೇ ಎಲ್ಲ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.