ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ

ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 06, 2023 | 11:58 AM

ಅತ್ತ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಮಂತ್ರಿಗಳ ಗೈರುಹಾಜರಿ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ ಮತ್ತು ಅವರ ಪಕ್ಷದ ಬೇರೆ ನಾಯಕರು ಸರ್ಕಾರವನ್ನು ಟೀಕಿಸುತ್ತಿದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಬೇರೆ ಕೆಲ ಸಚಿವರು ಬೆಂಗಳೂಲ್ಲಿದ್ದಾರೆ. ವಿರೋಧ ಪಕ್ಷಗಳ ಶಾಸಕರು ಸರ್ಕಾರದ ಪ್ರತಿನಿಧಿಗಳನ್ನು ಕಟ್ಟಿ ಹಾಕುತ್ತೇವೆ ಅಂತ ಹೇಳಿದ್ದಕ್ಕೆ ಹೆದರುತ್ತಿದ್ದಾರೆಯೇ?

ಬೆಂಗಳೂರು: ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ (Dr BR Ambedkar) ಅವರ 67 ನೇ ಪುಣ್ಯಸ್ಮರಣೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ವಿಧಾನಸೌಧದ ಮುಂಭಾಗದಲ್ಲಿ ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಂಬೇಡ್ಕರ್ ಅವರ ಬಗ್ಗೆ ಅಪಾರ ಶ್ರದ್ಧೆ ಮತ್ತು ಗೌರವ ಹೊಂದಿರುವ ಸಿದ್ದರಾಮಯ್ಯ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವ ಮೊದಲು ತಮ್ಮ ಶೂ ಕಳಚುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾಲಾರ್ಪಣೆ ಮಾಡಿದ ಬಳಿಕ ಅವರು ಪುಷ್ಪಾರ್ಚನೆ ಕೂಡ ಮಾಡುತ್ತಾರೆ. ಮುಖ್ಯಮಂತ್ರಿಯೊಂದಿಗಿರುವ ಸಮಾಜ ಕಲ್ಯಾಣ ಸೇವೆ ಸಚಿವ ಡಾ ಹೆಚ್ ಸಿ ಮಹದೆವಪ್ಪ (HC Mahadevappa) ಮತ್ತು ಮಾಜಿ ಸಚಿವ ಹೆಚ್ ಆಂಜನೇಯ ಸಹ ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅದಾದ ಬಳಿಕ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ಲಿಡ್ಕರ್ ಉತ್ಪನ್ನಗಳಿಗೆ ರಾಯಭಾರಿಯಾಗಿರುವ ಚಿತ್ರ ನಟ ಡಾಲಿ ಧನಂಜಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರವಿವಾರದಿಂದ ತೆಲಂಗಾಣದಲ್ಲಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್ಸಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರೆಂದು ಹೇಳಲಾಗಿತ್ತು. ಆದರೆ ಕಾರ್ಯಕ್ರಮ ಶುರುವಾದರೂ ಅವರ ಸುಳಿವಿರಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 06, 2023 11:58 AM