ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಸಾರಿಗೆ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್, ಕಂಪ್ಯೂಟರ್ ಆಪರೇಟರ್ ಸತೀಶ್, ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಮಾಲೀಕ ಶಿವಾನಂದ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಗೆ ವಂಚನೆ ಸಂಬಂಧ ದೂರು ದಾಖಲಿಸಲಾಗಿದೆ. ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಪಾವತಿಸುತ್ತಿದ್ದ PF, ESI ದಾಖಲೆ ನಕಲು ಮಾಡಿದೆ. ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದ ಬಗ್ಗೆ ದಾಖಲೆಗಳ ಸಹಿತ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ವ್ಯವಸ್ಥಾಪಕ ವಿನಯ್ ಬಾಬು ದೂರು ನೀಡಿದ್ದು ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. IPC 1860 ( U/S 34, 120 B, 420, 465, 468, 471) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.