ಬೆಂಗಳೂರು: ಹೊತ್ತಿ ಉರಿದ 2 ಅಂತಸ್ತಿನ ಕಟ್ಟಡ, 30 ಲಕ್ಷ ರೂ. ಅಧಿಕ ಮೌಲ್ಯದ ವಸ್ತುಗಳು ನಾಶ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಅಗ್ನಿ ಅವಘಡಗಳು ಸಂಭವಿಸುತ್ತಿರುತ್ತವೆ. ಕಳೆದ ವರ್ಷ ಅಂದರೆ 2023ರಲ್ಲಿ ಸಾಕಷ್ಟು ಅಗ್ನಿ ಅವಘಡಗಳು ಸಂಭವಿಸಿದವು. ಈ ವರ್ಷದ ಮೊದಲ ತಿಂಗಳಲ್ಲೇ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ.

ಬೆಂಗಳೂರು: ಹೊತ್ತಿ ಉರಿದ 2 ಅಂತಸ್ತಿನ ಕಟ್ಟಡ, 30 ಲಕ್ಷ ರೂ. ಅಧಿಕ ಮೌಲ್ಯದ ವಸ್ತುಗಳು ನಾಶ
ಪ್ರಾತಿನಿಧಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jan 27, 2024 | 7:43 AM

ಬೆಂಗಳೂರು, ಜನವರಿ 27: ರಾಜಧಾನಿಯ ಉಪ್ಪಾರಪೇಟೆ ಪೊಲೀಸ್ (Upparpete Police Station)​ ಠಾಣಾ ವ್ಯಾಪ್ತಿಯ ಬಳೆಪೇಟೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ. ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಯುವಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡದಲ್ಲಿದ್ದ ಪೇಂಟಿಂಗ್​​, ಬ್ಯಾಗ್​ ಅಂಗಡಿ ಬೆಂಕಿಗಾಹುತಿಯಾಗಿವೆ. ಇನ್ನು 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡ ಕೃಷ್ಣಮೂರ್ತಿ ಎಂಬುವರಿಗೆ ಸೇರಿದೆ. ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ (ಜ.26) ರಾತ್ರಿ ಘಟನೆ‌‌‌ ನಡೆದಿದೆ.

ಬೆಂಕಿ ಮೊದಲು ಪೇಂಟ್ ಮಾರುವ ಅಂಗಡಿಯಲ್ಲಿ ಕಾಣಿಸಿಕೊಂಡಿದೆ. ಕಾಲಕ್ರಮೇಣ ಬೆಂಕಿ ಕಟ್ಟಡವನ್ನೇ ಆವರಿಸಿದೆ. ವಿಚಾರ ತಿಳಿದ ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಕೃಷ್ಣಮೂರ್ತಿ ಕುಟುಂಬ ಬೆಂಕಿ ಅನಾಹುತ ಕಂಡು ಕಣ್ಣೀರು ಹಾಕಿದೆ. ಅಗ್ನಿಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಗೆ ನಿಖರ ಕಾರಣ ಏನು ಎಂಬುದರ ಕುರತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹಾಸನದ ಮಂಜುನಾಥ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ರೋಗಿಗಳು ಬಚಾವ್​

ಹೊತ್ತಿ ಉರಿದ ಮೂರು ಅಂತಸ್ತಿನ ಕಟ್ಟಡ

ಕಳೆದ ತಿಂಗಳು ಡಿಸೆಂಬರ್​​ 18 ರಂದು ಮಾರತ್ತ​​​​​​ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ರಿಡ್ಜ್​ ಬಳಿ ಇರುವ ಮೂರು ಅಂತಸ್ತಿನ ಕಟ್ಟಡಲ್ಲಿ ರಾತ್ರಿ 11.45ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿತ್ತು. ಲೂಯಿಸ್ ಫಿಲಿಪ್ ಬಟ್ಟೆ ಶೋರೂಂನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಪಕ್ಕದ ಅಂಗಡಿಗಳು, ಟ್ರಾನ್ಸ್​ಫಾರ್ಮರ್​​​ಗೆ ಹರಡಿತ್ತು. ಈ ವೇಳೆ ಕಟ್ಟಡದಲ್ಲಿದ್ದ ನಾಲ್ವರು ಪಕ್ಕದ ಕಟ್ಟಡಕ್ಕೆ ಹಾರಿದ್ದು, ಒಬ್ಬನ್ನನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದರು.
ಸುಮಾರು ಎರಡೂವರೆ ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಲಾಗಿತ್ತು. ಅಂಗಡಿಯಲ್ಲಿದ್ದ ಅಪಾರ ಮೌಲ್ಯದ ಬಟ್ಟೆ, ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಗಾಯವಾಗಿತ್ತು. ಬಟ್ಟೆ ಶೋರೂಂನ ಸ್ವಿಚ್​​ ಬೋರ್ಡ್​ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.

ಪ್ಲಾಸ್ಟಿಕ್​ ಗೋದಾಮು ಬೆಂಕಿಗಾಹುತಿ

ಬೆಂಗಳೂರಿನ ಕುಂಬಾರಪೇಟೆಯ ಗೋದಾಮಿನಲ್ಲಿ ನವೆಂಬರ್ 19 ರಂದು ಅಗ್ನಿ ಅವಘಡ ಸಂಭವಿಸಿತ್ತು. ಆದಿಲ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮು ಬೆಂಕಿಗಾಹುತಿಯಾಗಿತ್ತು. ಮಧ್ಯಾಹ್ನ ಹೊತ್ತಿಕೊಂಡಿದ್ದ ಬೆಂಕಿ, ನವೆಂಬರ್​ 20ರ ವರೆಗೆ ಧಗಧಗಿಸಿತ್ತು. ಆರಂಭದಲ್ಲಿ ಪ್ಲಾಸ್ಟಿಕ್ ಗೋದಾಮಿನ 3, 4ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಕೊನೆ ಕೊನೆಗೆ ಐದನೇ ಮಹಡಿಗೂ ಬೆಂಕಿ ವ್ಯಾಪಿಸಿಕೊಂಡಿತ್ತು. ಐದನೇ ಫ್ಲೋರ್​ನಲ್ಲಿ ಮತ್ತೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಲು ಹರಸಾಹಸಪಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:35 am, Sat, 27 January 24