G20 Summit: ಶುದ್ಧ ಇಂಧನ ಬಳಕೆಗೆ ಹೊಸ ವೇಗ ನೀಡಲು ಜಿ20 ಶೃಂಗ ಸಹಕಾರಿ; ಕೇಂದ್ರ ಇಂಧನ ಸಚಿವ ಆರ್​ಕೆ ಸಿಂಗ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2023 | 2:52 PM

Green Energy: ಇಂಧನ ಭದ್ರತೆಯ ಖಾತ್ರಿಗಾಗಿ ಏನು ಮಾಡಬೇಕು? ಪೂರೈಕೆ ಸರಪಳಿಗಳ ಅಂತರ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಜಿ-20 ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ.

G20 Summit: ಶುದ್ಧ ಇಂಧನ ಬಳಕೆಗೆ ಹೊಸ ವೇಗ ನೀಡಲು ಜಿ20 ಶೃಂಗ ಸಹಕಾರಿ; ಕೇಂದ್ರ ಇಂಧನ ಸಚಿವ ಆರ್​ಕೆ ಸಿಂಗ್
ಕೇಂದ್ರ ಇಂಧನ ಸಚಿವ ಆರ್​.ಕೆ.ಸಿಂಗ್
Follow us on

ಬೆಂಗಳೂರು: ಭಾರತವು ಆಯೋಜಿಸಿರುವ ‘ಜಿ-20’ ಶೃಂಗಸಭೆಯು (G-20 Summit) ಇಂಧನ ವಲಯದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ. ಶುದ್ಧ ಇಂಧನದ (Green Energy) ಕಾಲಮಿತಿ ಬಳಕೆಗೆ ಹೊಸ ಒತ್ತು ಸಿಗಲಿದೆ ಎಂದು ಕೇಂದ್ರ ಇಂಧನ ಸಚಿವ ಆರ್​.ಕೆ.ಸಿಂಗ್ (R.K.Singh) ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿ-20 ಶೃಂಗಸಭೆಯು ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಲಿದೆ. ವಿವಿಧ ದೇಶಗಳ ಆರ್ಥಿಕ ಸಮಸ್ಯೆಗಳ ಬಗ್ಗೆ ಶೃಂಗಸಭೆಯು ಬೆಳಕು ಚೆಲ್ಲುತ್ತದೆ. ಜಾಗತಿಕ ಮಟ್ಟದಲ್ಲಿ ಉತ್ತಮ ಆಡಳಿತ ರೂಪಿಸಲು ಹಾಗೂ ಬಲಪಡಿಸಲು ಪ್ರಮುಖ ಪಾತ್ರವಹಿಸುತ್ತದೆ’ ಎಂದು ವಿವರಿಸಿದರು.

ಇಂಧನ ಪರಿವರ್ತನೆ ಕಾರ್ಯತಂಡವು ಕೆಲ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿ ತಂತ್ರಜ್ಞಾನ ಅಂತರವನ್ನು ಪರಿಹರಿಸುವ ಮೂಲಕ ಶಕ್ತಿ ಪರಿವರ್ತನೆ, ಇಂಧನ ಪರಿವರ್ತನೆಗಾಗಿ ಆಗುತ್ತಿರುವ ವೆಚ್ಚವನ್ನು ಕಡಿತಗೊಳಿಸಲಾಗುವುದು. ಇಂಧನ ಭದ್ರತೆಯ ಖಾತ್ರಿಗಾಗಿ ಏನು ಮಾಡಬೇಕು? ಪೂರೈಕೆ ಸರಪಳಿಗಳ ಅಂತರ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳು, ಇಂಧನ ದಕ್ಷತೆ, ಕೈಗಾರಿಕೆಗಳಿಂದ ಹೊರಸೂಸುವ ಕಾರ್ಬನ್ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂಧನ ಉತ್ಪಾದನೆಯ ಜೊತೆಗೆ ಬಳಕೆಯ ವಿಚಾರದಲ್ಲಿಯೂ ವಿವಿಧ ದೇಶಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಶುದ್ದ ಇಂಧನಕ್ಕಾಗಿ ಸಾರ್ವತ್ರಿಕ ಪ್ರವೇಶ ಮತ್ತು ಕೈಗೆಟುಕುವ, ಅಂತರ್ಗತ ಇಂಧನ ಪರಿವರ್ತನೆ ಮಾರ್ಗಗಳನ್ನು ರೂಪಿಸಬೇಕು. ಇಂಧನ ಪರಿವರ್ತನೆ ಕಾರ್ಯತಂಡಗಳು ಗುಂಪು ಪರಿವರ್ತನೆಯನ್ನು ಸಾಧಿಸುವ ಗುರಿ ಹೊಂದಿವೆ. ಇಂಧನ ಅಗತ್ಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತವೆ. ನಿಗದಿತ ಕಾಲಮಿತಿಯಲ್ಲಿ ಕೈಗೆಟುಕುವಂತೆ ದೇಶಾದ್ಯಂತ ಇಂಧನ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯನ್ನು ವಿತರಿಸಲಾಗುವುದು. ತಂತ್ರಜ್ಞಾನದ ಅಂತರವನ್ನು ಪರಿಹರಿಸಲು ಅಗತ್ಯ ಹಣಕಾಸು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಹಿಂಡನ್​ಬರ್ಗ್​ ವರದಿಯಿಂದ ಇಂಧನ ವಲಯಕ್ಕೆ ಧಕ್ಕೆಯಿಲ್ಲ

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್​ ಷೇರು ವಹಿವಾಟಿನಲ್ಲಿ ಅಕ್ರಮ ನಡೆದಿದೆ ಎಂಬ ಹಿಂಡನ್​ಬರ್ಗ್​ ವರದಿ ಮತ್ತು ನಂತರದ ದಿನಗಳಲ್ಲಿ ಷೇರುಪೇಟೆಯಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯ ಕುಸಿದಿರುವ ಕುರಿತು ಸಚಿವ ಆರ್​.ಕೆ.ಸಿಂಗ್ ಎರಡು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದರು. ‘ಪರಿಸರಸ್ನೇಹಿ ಇಂಧನ ಬಳಕೆ ಹೆಚ್ಚಿಸಬೇಕು ಎಂಬ ಭಾರತದ ಪ್ರಯತ್ನಕ್ಕೆ ಹಿಂಡನ್​ಬರ್ಗ್​ ವರದಿಯ ಪರಿಣಾಮದಿಂದ ಯಾವುದೇ ಹಿನ್ನಡೆ ಆಗುವುದಿಲ್ಲ’ ಎಂದು ಹೇಳಿದ್ದರು.

‘ಭಾರತದಲ್ಲಿ ದಿನದಿಂದ ದಿನಕ್ಕೆ ನವೀಕರಿಸಬಹುದಾದ ಇಂಧನ ಬಳಕೆ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. ಜಾಗತಿಕ ಮಟ್ಟದ ಸುಮಾರು 16 ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತದ ಹಸಿರುವ ಇಂಧನ ವಲಯವು ತನ್ನ ದಾಪುಗಾಲನ್ನು ಮುಂದುವರಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: G20 Meet: ಬೆಂಗಳೂರಿನಲ್ಲಿ ಫೆ. 5ರಿಂದ ಜಿ20 ಇಟಿಡಬ್ಲ್ಯೂಜಿ ಸಭೆ; ಪಾವಗಡ ಸೋಲಾರ್ ಪಾರ್ಕ್​ಗೆ ಗಣ್ಯರ ಭೇಟಿ ಸಾಧ್ಯತೆ

ಜಿ-20 ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Sun, 5 February 23