ಬೆಂಗಳೂರು: ಗಣೇಶ ಮೂರ್ತಿ ತಯಾರಕರ ಮಳಿಗೆಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಗಣೇಶ ಮೂರ್ತಿ ತಯಾರಕರ ಸಮಸ್ಯೆ ಆಲಿಸಿದರು. ಬೆಂಗಳೂರಿನ ಮಾವಳ್ಳಿ ಆರ್.ವಿ.ರಸ್ತೆಯಲ್ಲಿರುವ ಮಳಿಗೆಗಳಿಗೆ ಅವರು ಭೇಟಿ ನೀಡಿದರು. ಇದೇ ವೇಳೆ ₹ 2 ಸಾವಿರ ನೀಡಿ ಗೌರಿ ಗಣೇಶ ಮೂರ್ತಿಯನ್ನು ಸಹ ಅವರು ಖರೀದಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆರ್.ವಿ.ದೇವರಾಜ್, ಆರ್.ವಿ.ಯುವರಾಜ, ಮಹಮ್ಮದ್ ನಲಪಾಡ್ ಸಹಯೋಗ ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಕೊವಿಡ್ ನಿಯಮಗಳನ್ನ ಪಾಲಿಸಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಗಣೇಶ ಮೂರ್ತಿ ಸಂಘಟಕರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲ್ಲಿದ್ದೇವೆ ಎಂದು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದೆ. ಬೇಡಿಕೆ ಬಂದಲ್ಲಿ ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ. ವಿಶೇಷ ಆಯುಕ್ತರ ಮಾತಿಗೆ ಒಪ್ಪಿದ ಗಣೇಶ ಉತ್ಸವ ಸಮಿತಿ, ಮೂರ್ತಿ ತಯಾರಕರ ಧರಣಿಯನ್ನು ಹಿಂಪಡೆದಿದ್ದಾರೆ. 3 ದಿನದ ಆಚರಣೆಯ ನಿಯಮವನ್ನೂ ಬಿಬಿಎಂಪಿ ಹಿಂಪಡೆದಿದೆ ಎಂದು ತಿಳಿದುಬಂದಿದೆ. ಆದರೆ ಈಕುರಿತು ಅಧಿಕೃತ ಆದೇಶ ಇನ್ನೂ ಬಿಡುಗಡೆಗೊಂಡಿಲ್ಲ.
ಈಕುರಿತು ಟಿವಿ9 ಜತೆ ಮಾತನಾಡಿದ ಬೆಂಗಳೂರು ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜ್, ಯಾವುದೇ ಸರ್ಕಾರ ಧಾರ್ಮಿಕ ವಿಚಾರಕ್ಕೆ ತಲೆ ಹಾಕಬಾರದು ಎಂಬ ವಿಷಯಕ್ಕೆ ಜಯ ಸಿಕ್ಕಿದೆ. ಗಣಪತಿ ಮೂರ್ತಿ ಎತ್ತರದ ಬಗ್ಗೆ ಕೂಡ ಬಿಬಿಎಂಪಿ ನಿಯಮ ಹಿಂಪಡೆದಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಅವಕಾಶ ಕೊಟ್ಟಿದೆ. ಗಣೇಶ ಹಬ್ಬ ಆಚರಿಸಲು ಚೌತಿ ಯಿಂದ ಚರ್ತುದರ್ಶಿವರೆಗೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಾ ರೀತಿಯ ಅನುಕೂಲ ಮಾಡಿಕೊಳ್ಳುತ್ತೇವೆ ಹಾಗೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ವಾರ್ಡ್ ನಲ್ಲಿ ಎಲ್ಲಾ ಸಮಿತಿಗೂ ಗಣೇಶ ಕೂರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:
ಗಣಪತಿ ವಿಗ್ರಹಗಳನ್ನು ಸ್ಪಾನ್ಸರ್ ಮಾಡದ ರಾಜಕಾರಣಿಗಳು; ಗಣೇಶನ ವಿಗ್ರಹಗಳ ಮಾರಾಟದಲ್ಲಿ ತೀವ್ರ ಕುಸಿತ
Published On - 7:52 pm, Thu, 9 September 21