ಸೈಲೆಂಟ್ ಕಿಲ್ಲರ್ ಆಗ್ತಿದೆ ಗ್ಯಾಸ್ ಗೀಸರ್: ಜನರೇ ಎಚ್ಚರ!

ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗ್ಯಾಸ್​ ಗೀಸರ್​​​ನಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು, ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಳಪೆ ಗುಣಮಟ್ಟದ ಗ್ಯಾಸ್​ ಗೀಸರ್ ಬಳಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನಿತ್ಯ ಸ್ನಾನಕ್ಕೆ ಗ್ಯಾಸ್​ ಗೀಸರ್​​ ಬಳಕೆ ಮಾಡುವವರು ಎಚ್ಚರವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ​​

ಸೈಲೆಂಟ್ ಕಿಲ್ಲರ್ ಆಗ್ತಿದೆ ಗ್ಯಾಸ್ ಗೀಸರ್: ಜನರೇ ಎಚ್ಚರ!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Dec 10, 2025 | 6:33 PM

ಬೆಂಗಳೂರು, ಡಿಸೆಂಬರ್​ 10: ಇತ್ತೀಚೆಗೆ ರಾಜ್ಯದಲ್ಲಿ (Karnataka) ಗ್ಯಾಸ್​ ಗೀಸರ್​​​​ನಿಂದ (gas geyser) ಅನಾಹುತಗಳು ಸಂಭವಿಸುತ್ತಿದ್ದು, ಜನರು ಜೀವ ಕೂಡ ಕಳೆದುಕೊಳ್ಳುತ್ತಿದ್ದಾರೆ. ಕಳಪೆ ಗುಣಮಟ್ಟದ ಗ್ಯಾಸ್​ ಗೀಸರ್​ ಕೂಡ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಗ್ಯಾಸ್​ ಗೀಸರ್​ನಿಂದ ಜನರು ಎಚ್ಚರ ವಹಿಸಬೇಕಿದೆ. ಈ ಗ್ಯಾಸ್​ ಗೀಸರ್​​ಗಳನ್ನು ಹೆಚ್ಚಾಗಿ ಸ್ನಾನದ ಮನೆಯಲ್ಲಿ ಅಳವಡಿಸಲಾಗುತ್ತದೆ. ಅಗ್ಗದ ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್​​​ ದಿನದಿಂದ ದಿನಕ್ಕೆ ಸೈಲೆಂಟ್ ಕಿಲ್ಲರ್ ಆಗುತ್ತಿದೆ.

ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಜನರು ಆಧುನಿಕ ಜೀವನಕ್ಕೆ ಹೊಂದಿಕೊಳ್ಳಲು ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಅದು ಉಡುಗೆ-ತೊಡುಗೆಯಿಂದ ಹಿಡಿದು ಸ್ನಾನದ ಗೃಹದವರೆಗೂ ಆಧುನಿಕ ಜೀವನದ ಮೊರೆ ಹೋಗುತ್ತಿದ್ದಾರೆ. ಅಂತಹ ಜೀವನ ಶೈಲಿ ಜನರ ಜೀವಕ್ಕೆ ಕುತ್ತು ತರುತ್ತಿದೆ. ಇತ್ತೀಚೆಗೆ ರಾಜಧಾನಿಯಲ್ಲಿ ಗ್ಯಾಸ್​ ಗೀಸರ್​​​​ನಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ನಾನದ ಗೃಹಕ್ಕೆ ಸ್ನಾನ ಮಾಡಲು ಅಂತಾ ಹೋದವರು ಶವವಾಗಿ ಬರುತ್ತಿದ್ದಾರೆ. ಇದಕ್ಕೆ ಕಾರಣ ಗ್ಯಾಸ್ ಗೀಸರ್.

ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ​ಗೀಸರ್​ನಿಂದ ವಿಷಾನಿಲ ಸೋರಿಕೆ; ತಾಯಿ, ಮಗ ಸಾವು

ದಿನದಿಂದ ದಿನಕ್ಕೆ ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್ ಆಗುತ್ತಿದ್ದು, ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್​​ ಅನ್ನು ಜನರು ಬಳಕೆ ಮಾಡುತ್ತಿದ್ದು, ಇದರಿಂದ ಹೊರ ಬರುವ ಕಾರ್ಬೋಹೈಡ್ರೇಟ್ ಶ್ವಾಸಕೋಶಕ್ಕೆ ಸೇರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾರ್ಬೋಹೈಡ್ರೇಟ್​ಗೆ ಯಾವುದೇ ಬಣ್ಣ, ರುಚಿ, ವಾಸನೆ ಇಲ್ಲದೆ ಇರುವುದರಿಂದ ಇದು ಲೀಕ್ ಆಗಿ ಮಾನವನ ಶ್ವಾಸಕೋಶ ಸೇರುವುದು ಕೂಡ ಗೊತ್ತಾಗುವುದಲ್ಲಿ ಎನ್ನುತ್ತಾರೆ ತಜ್ಞರು. ಇತ್ತೀಚೆಗೆ ಗ್ಯಾಸ್ ಗೀಸರ್ ಲೀಕೇಜ್​ನಿಂದ ಸಾವನ್ನಪ್ಪುತ್ತಿರುವ ಪ್ರಕರಣ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ.

ಈ ವರ್ಷ 15ಕ್ಕೂ ಹೆಚ್ಚು ಕೇಸ್ 

ಎರಡು ದಿನದ ಹಿಂದೆ ಅಂದರೆ ಡಿಸೆಂಬರ್​ 08ರಂದು ಗೋವಿಂದರಾಜ ನಗರದ ನಿವಾಸಿ ತಾಯಿ ಚಾಂದಿನಿ (26) ಹಾಗೂ 4 ವರ್ಷದ ಮಗ ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮ್​ಗೆ ಹೋಗಿದ್ದ ಅಕ್ಕ ತಂಗಿ ದುರಂತ ಸಾವು: ಆಗಿದ್ದೇನು?

ಡಿಸೆಂಬರ್​ 01ರಂದು ಬೆಂಗಳೂರಿನ ತೋಟದ ಗುಡ್ಡದಹಳ್ಳಿ ನಿವಾಸಿ ಭೂಮಿಕಾ ಕೂಡ ಗ್ಯಾಸ್ ಗೀಜರ್ ಸೋರುವಿಕೆಯಿಂದಾಗಿ ಸಾವಿಗೆ ತುತ್ತಾಗಿದ್ದರು. ನವೆಂಬರ್​​ 25ರಂದು ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಮನೆಯೊಂದರಲ್ಲಿ ಸ್ನಾನಕ್ಕೆ ಹೋದ ಸಹೋದರಿಯರು ಗ್ಯಾಸ್ ಗೀಸರ್ ಸೋರಿಕೆಯಿಂದ ದುರಂತ ಅಂತ್ಯ ಕಂಡಿದ್ದರು.

ಮುನ್ನೆಚ್ಚರಿಕಾ ಕ್ರಮಗಳೇನು?

  • ಒಳ್ಳೆಯ ಗುಣಮಟ್ಟದ ಗೀಜರ್ ಬಳಕೆ ಮಾಡಬೇಕು.
  • ಗೀಜರ್ ಆನ್ ಮಾಡಿಕೊಂಡು ಸ್ನಾನ ಬೇಡ, ಕಿಟಕಿ ಓಪನ್ ಇರಬೇಕು.
  • ಸ್ನಾನ ಗೃಹದಲ್ಲಿ ಸಿಲಿಂಡರ್ ಇರಬಾರದು.
  • ಕಾರ್ಬೋಹೈಡ್ರೇಟ್ ಸೋರಿಕೆಗೆ ಅಲಾರಂ ಬಳಕೆ ಮಾಡಬೇಕು.

ಒಟ್ಟಿನಲ್ಲಿ ಸ್ನಾನಕ್ಕೆ ಅಂತಾ ಹೋದವರು ಸಾವನ್ನಪ್ಪಿರುವಂತಹ ಪ್ರಕರಣ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದ್ದು, ಹೀಗಾಗಿ ಜನರು ಈ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.