ಎಸ್​ಐಆರ್​ಗೂ ಮೊದಲಿನ ಹಳೆ ಮತದಾರರ ಪಟ್ಟಿಯಲ್ಲೇ ಜಿಬಿಎ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್​ಗೆ ರಾಜ್ಯ ಚುನಾವಣಾ ಆಯೋಗ ಮನವಿ!

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ಚುನಾವಣೆಗಾಗಿ ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ದತ್ತಾಂಶ ಇನ್ನೂ ಲಭ್ಯವಾಗದ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರ ಮತದಾರರ ಪಟ್ಟಿಯನ್ನೇ ಬಳಸಲು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಹೀಗೆ ಮಾಡಿದರೆ ಮಾತ್ರ ನಿಗದಿತ ಗಡುವಿನ ಒಳಗೆ ಚುನಾವಣೆ ನಡೆಸುವುದು ಸಾಧ್ಯ ಎಂದು ಆಯೋಗ ಹೇಳಿದೆ.

ಎಸ್​ಐಆರ್​ಗೂ ಮೊದಲಿನ ಹಳೆ ಮತದಾರರ ಪಟ್ಟಿಯಲ್ಲೇ ಜಿಬಿಎ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್​ಗೆ ರಾಜ್ಯ ಚುನಾವಣಾ ಆಯೋಗ ಮನವಿ!
ಜಿಬಿಎ ಕಚೇರಿ ಹಾಗೂ ಸುಪ್ರೀಂ ಕೋರ್ಟ್ (ಸಾಂದರ್ಭಿಕ ಚಿತ್ರ)

Updated on: Nov 13, 2026 | 12:13 PM

ಮುಖ್ಯಾಂಶಗಳು

  • ಹಳೆಯ ಮತದಾರರ ಪಟ್ಟಿಗೆ ಎಸ್‌ಇಸಿ ಮೊರೆ
  • ಐದು ಪಾಲಿಕೆ ಚುನಾವಣೆ ಜನವರಿವರೆಗೆ ವಿಸ್ತರಣೆ ಮನವಿ
  • ಸಂಪೂರ್ಣ ಎಸ್‌ಐಆರ್ ಡೇಟಾ ಇನ್ನೂ ಲಭ್ಯವಿಲ್ಲದ ಕಾರಣ ಅರ್ಜಿ

ಬೆಂಗಳೂರು, ನವೆಂಬರ್ 13: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಎಸ್​ಐಆರ್​ಗೂ ಮೊದಲಿನ ಹಳೆಯ ಮತದಾರರ ಪಟ್ಟಿಯನ್ನೇ ಬಳಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗ ಮನವಿ ಮಾಡಿದೆ.

ಚುನಾವಣಾ ಪ್ರಕ್ರಿಯೆ ಕಾಲಾವಕಾಶ ವಿಸ್ತರಿಸುವಂತೆಯೂ ಅರ್ಜಿ

ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು 2027ರ ಜನವರಿ 31ರವರೆಗೆ ಕಾಲಾವಕಾಶ ವಿಸ್ತರಿಸುವಂತೆಯೂ ರಾಜ್ಯ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಜುಲೈ 17ರಂದು ಐದು ನಗರ ಪಾಲಿಕೆಗಳ ಚುನಾವಣೆಯನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿತ್ತು. ಆಗ ನಡೆಯುತ್ತಿದ್ದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪರಿಗಣಿಸಿ ಈ ನಿರ್ದೇಶನ ನೀಡಲಾಗಿತ್ತು.

Loading...

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ವಾದವೇನು?

ಎಸ್‌ಐಆರ್ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದರೂ, ಸೇರ್ಪಡೆ, ಹೆಸರು ತೆಗೆದುಹಾಕುವಿಕೆ, ವರ್ಗಾವಣೆ ಹಾಗೂ ತಿದ್ದುಪಡಿಗಳನ್ನು ಒಳಗೊಂಡ ಸಂಪೂರ್ಣ ದೃಢೀಕೃತ ಡೇಟಾವನ್ನು ಚುನಾವಣಾ ಆಯೋಗಕ್ಕೆ ಇನ್ನೂ ಒದಗಿಸಲಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಕೇವಲ ಅಂತಿಮ ಪಟ್ಟಿ ಪ್ರಕಟವಾದರೆ ಸಾಕಾಗುವುದಿಲ್ಲ, ವಾರ್ಡ್‌ವಾರು ವಿಭಾಗ, ಮ್ಯಾಪಿಂಗ್, ಪರಿಶೀಲನೆ ಮತ್ತು ಮತದಾರರ ಪಟ್ಟಿಯ ಪ್ರಕಟಣೆಗೆ ಸಂಪೂರ್ಣ ಬಳಕೆಗೆ ಯೋಗ್ಯವಾದ ಡೇಟಾ ಅಗತ್ಯ ಎಂದು ಅದು ವಾದಿಸಿದೆ.

ಹೊಸ ಮತದಾರರ ಡೇಟಾ ಲಭ್ಯವಾಗುವವರೆಗೆ ಕಾಯಬೇಕಾದರೆ, ವಾರ್ಡ್‌ವಾರು ಪಟ್ಟಿಗಳನ್ನು ಸಿದ್ಧಪಡಿಸಲು ಕನಿಷ್ಠ ಎರಡು ತಿಂಗಳು ಮತ್ತು ಚುನಾವಣೆ ನಡೆಸಲು ಮತ್ತೊಂದು ತಿಂಗಳು ಬೇಕಾಗಲಿದೆ ಎಂದು ಆಯೋಗ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ಧಪಡಿಸಿರುವ 2026ರ ಏಪ್ರಿಲ್ 18ರ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅನುಮತಿ ನೀಡುವಂತೆ ಕೋರಿದೆ.

ಇದನ್ನೂ ಓದಿ: ಜಿಬಿಎ ಚುನಾವಣೆಗೆ ಕಾಲಾವಕಾಶ ವಿಸ್ತರಣೆಗೆ ಮನವಿ: ಸುಪ್ರೀಂಕೋರ್ಟ್​ಗೆ ಕರ್ನಾಟಕ ಸರ್ಕಾರ ಅರ್ಜಿ

ಇದೇ ವೇಳೆ, ರಾಜ್ಯದ ಎಲ್ಲಾ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2025ರ ಅಕ್ಟೋಬರ್ 1ಕ್ಕೆ ಇದ್ದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಆಧಾರದಲ್ಲಿ ನಡೆಸಲು ಅವಕಾಶ ನೀಡುವಂತೆಯೂ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಹಳೆಯ ಪಟ್ಟಿಯನ್ನು ಬಳಸಲು ಅನುಮತಿ ದೊರೆತರೆ, ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು 2027ರ ಜನವರಿ 31ರೊಳಗೆ ಪೂರ್ಣಗೊಳಿಸಬಹುದು ಎಂದು ಆಯೋಗ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us