ಹಿರಿಯ ನಾಗರಿಕರಿಗೆ ಗುಡ್ನ್ಯೂಸ್: ಹಿಂದೂ ದೇವಾಲಯಗಳಲ್ಲಿ ನೇರ ಪ್ರವೇಶ
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ 'ಎ' ಮತ್ತು 'ಬಿ' ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ, ಹಿರಿಯ ನಾಗರಿಕರಿಗೆ ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ (senior citizens) ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾಗಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಸವರಾಜೇಂದ್ರ ಸುತ್ತೋಲೆ ಹೊರಡಿಸಿದ್ದಾರೆ. ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ದಾಖಲೆ ಅಥವಾ ಆಧಾರ್ ತೋರಿಸಿದರೆ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ದೇಗುಲಗಳಲ್ಲಿ ಹಿರಿಯ ನಾಗರಿಕರ ಸಹಾಯ ಕೇಂದ್ರ ಸ್ಥಾಪನೆಗೆ ಕೂಡಾ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: International Yoga Day 2023: ಬಾಗಲಕೋಟೆಯ 72-ವರ್ಷ ವಯಸ್ಸಿನ ವೃದ್ಧೆ ದಾಕ್ಷಾಯಿಣಿ ಯೋಗಾಭ್ಯಾಸ ಬೆರಗು ಮೂಡಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಿರಿಯ ನಾಗರೀಕರಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟಕರವಾಗಿರುವುದರಿಂದ, 65 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಶೀಘ್ರ ದರ್ಶನಕ್ಕೆ ತಪ್ಪದೇ ಅಗತ್ಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಹಿರಿಯ ನಾಗರಿಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ ಅವರಿಗೆ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ದೇವಾಲಯದಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರಿಕರಿಗೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಜು 03ರಿಂದ ಅಧಿವೇಶನ ಆರಂಭ, ಜೂ 26ರಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ: ವಿಧಾನಸಭಾಧ್ಯಕ್ಷ ಯುಟಿ ಖಾದರ್
ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯ ಕೇಂದ್ರವನ್ನು ಸ್ಥಾಪಿಸಿ, ಹಿರಿಯ ನಾಗರಿಕರಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು. ಸದರಿ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜಿಸಿ ಹಿರಿಯ ನಾಗರಿಕರಿಗೆ ತ್ವರಿತ ದರ್ಶನ ಏರ್ಪಡಿಸಲು ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Wed, 21 June 23