ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ ಮಾಡಿ ಆದೇಶ; ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ಗೌರವಧನವನ್ನು ಕಳೆದ 6 ವರ್ಷಗಳಿಂದ ಪರಿಷ್ಕರಣೆ ಮಾಡಿರಲಿಲ್ಲ. ಅತಿಥಿ ಶಿಕ್ಷಕರಿಗೆ ನೀಡಲಾಗುವ ಗೌರವ ಸಂಭಾವನೆಯನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ ಮಾಡಿ ಆದೇಶ; ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Jun 29, 2022 | 5:46 PM

ಬೆಂಗಳೂರು: ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಎರಡೂವರೆ ಸಾವಿರ ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್(BC Nagesh) ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ(Basavaraj Bommai) ಧನ್ಯವಾದ ತಿಳಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಹಾಲಿ 7500 ರೂ. ಗೌರವ ಸಂಭಾವನೆ ನೀಡಲಾಗುತ್ತಿತ್ತು. ಈಗ 2500 ರೂ.ಗಳನ್ನು ಏರಿಕೆ ಮಾಡಲಾಗಿದೆ. ಹೀಗಾಗಿ ಒಟ್ಟು ಗೌರವ ಸಂಭಾವನೆ 10,000 ರೂ. ಆಗಲಿದೆ. ಇನ್ನು ಸರ್ಕಾರಿ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 8000 ರೂ. ಹಾಲಿ ಗೌರವ ಸಂಭಾವನೆ ಇತ್ತು. 2500 ರೂ. ಏರಿಕೆ ಮಾಡಲಾಗಿದೆ. ಪರಿಷ್ಕೃತ ಆದೇಶದ ಪ್ರಕಾರ 10,500 ರೂ. ಗೌರವ ಸಂಭಾವನೆ ದೊರೆಯಲಿದೆ. ಇದನ್ನೂ ಓದಿ: ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕಬಾರದು: ಧಾರವಾಡ ಹೈಕೋರ್ಟ್​​

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ಗೌರವಧನವನ್ನು ಕಳೆದ 6 ವರ್ಷಗಳಿಂದ ಪರಿಷ್ಕರಣೆ ಮಾಡಿರಲಿಲ್ಲ. ಅತಿಥಿ ಶಿಕ್ಷಕರಿಗೆ ನೀಡಲಾಗುವ ಗೌರವ ಸಂಭಾವನೆಯನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು 12,000 ರೂ.ಗೆ, ಪ್ರೌಢಶಾಲೆಗಳಲ್ಲಿನ ಅತಿಥಿ ಶಿಕ್ಷಕರ ಸಂಭಾವನೆಯನ್ನು 15,000 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆದ್ರೆ ಸರ್ಕಾರ ಎರಡೂವರೆ ಸಾವಿರ ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.