ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್(Puneeth Rajkumar) ನಮ್ಮನ್ನ ಅಗಲಿ ಬರೋಬ್ಬರಿ 10 ತಿಂಗಳಾಗುತ್ತಿದೆ. ಆದ್ರೂ ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲಿ ಪುನೀತ್ ಜೀವಿಸುತ್ತಿದ್ದಾರೆ. ಅಭಿಮಾನಿಗಳಿಗೆ ಅವರ ಮೇಲಿನ ಕ್ರೇಜ್ ಕೊಂಚವೂ ಕಡಿಮೆ ಆಗಿಲ್ಲ. ಇದೀಗ ಪುನೀತ್ ಅಭಿಮಾನಿಗಳು ಸಂತೋಷ ಪಡುವಂತ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ನವೆಂಬರ್/ಡಿಸೆಂಬರ್ ನಲ್ಲಿ ಪುನೀತ್ ಉಪಗ್ರಹ(Puneet Satellite) ನಭಕ್ಕೆ ನೆಗೆಯಲಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪುನೀತ್ ಉಪಗ್ರಹ ನಿರ್ಮಿಸುತ್ತಿದ್ದಾರೆ. ಪುನೀತ್ ಉಪಗ್ರಹವನ್ನು ನ.15 ರಿಂದ ಡಿ.31ರ ನಡುವೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಸಾವಿರ ವಿದ್ಯಾರ್ಥಿಗಳು ಉಡಾವಣೆಗೆ ಶ್ರೀಹರಿಕೋಟಾಕ್ಕೆ ತೆರಳಲಿದ್ದಾರೆ.
ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳ ಆಯೋಜನೆ ಮಾಡಲಾಗಿದೆ. ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ಕರೆದೊಯ್ಯಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮುಂದಾಗಿದೆ. ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ, ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಬೆಂಗಳೂರು ವಲಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಂದ ಕೆಜಿಎಸ್3ಸ್ಯಾಟ್ ಉಪಗ್ರಹ 1.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಉಪಗ್ರಹ ಅಭಿವೃದ್ಧಿಗೆ ವ್ಯವಸ್ಥೆ ಮಾಡಲಾಗಿದ್ದು ದಿ. ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಈ ಉಪಗ್ರಹಕ್ಕೆ ಪುನೀತ್ ಹೆಸರು ಇಡಲಾಗಿದೆ. ಪ್ರಧಾನಿ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:59 pm, Thu, 25 August 22