ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಟೆಂಡರ್ ಹಿಂಪಡೆದ ರಾಜ್ಯ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 18, 2022 | 1:50 PM

ಸಾರಿಗೆ ಇಲಾಖೆಯು ಕಳೆದ ಮಾರ್ಚ್ 29ರಂದು ಹೊರಡಿಸಿದ್ದ ಟೆಂಡರ್ ಅನ್ನು ಹಿಂಪಡೆಯಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ತಿಳಿಸಿದೆ.

ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಟೆಂಡರ್ ಹಿಂಪಡೆದ ರಾಜ್ಯ ಸರ್ಕಾರ
ವಾಹನಗಳು
Follow us on

ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್​ಎಸ್​ಆರ್​ಪಿ) ಅಳವಡಿಕೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಕಳೆದ ಮಾರ್ಚ್ 29ರಂದು ಹೊರಡಿಸಿದ್ದ ಟೆಂಡರ್ ಅನ್ನು ಹಿಂಪಡೆಯಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ತಿಳಿಸಿದರು. ಕಳೆದ ವರ್ಷ ಆಗಸ್ಟ್ 1ರಂದು ಈ ಸಂಬಂಧ ರಾಜ್ಯ ಸರ್ಕಾರ ಟೆಂಡರ್ ಕರೆದಿತ್ತು. ಟೆಂಡರ್ ಪ್ರಶ್ನಿಸಿ ಹಲವು ಸಂಸ್ಥೆಗಳು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದವು. ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ಆದೇಶ ಹಿಂಪಡೆಯಿತು.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮಾರ್ಚ್ 31, 2019ರ ಬಳಿಕ ರಸ್ತೆಗೆ ಇಳಿಯುವ ಹೊಸ ವಾಹನಗಳಿಗೆ ಎಚ್​ಎಸ್​ಆರ್​ಪಿ ಸಂಖ್ಯೆಯನ್ನು ಆರಂಭದಲ್ಲಿಯೇ ಅಳವಡಿಸುವ ಜೊತೆಗೆ, ಹಾಲೊಗ್ರಾಂ ಜೊತೆಗೆ ವಿಶಿಷ್ಟ ಗುರುತು ಸಂಖ್ಯೆಯನ್ನು ಸಾರಿಗೆ ಇಲಾಖೆ ನೀಡುತ್ತಿತ್ತು. ಇದರಲ್ಲಿ ಎಂಜಿನ್ ಸಂಖ್ಯೆ, ಛಾಸಿ ಸಂಖ್ಯೆ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ಇರುತ್ತಿತ್ತು. ಗ್ರಾಹಕರಿಗೆ ವಾಹನಗಳನ್ನು ಮಾರಾಟ ಮಾಡುವ ಡೀಲರ್​ಗಳು ಹೋಮೋಲೋಗೇಷನ್ ಪೋರ್ಟಲ್‌ನಲ್ಲಿ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ, ಸಾರಿಗೆ ಇಲಾಖೆ ಅಧಿಕಾರಿಗಳು ಅನುಮೋದನೆ ಕೊಡುತ್ತಿದ್ದರು. ನಂತರ ಈ ಮಾಹಿತಿ ನಂಬರ್ ಪ್ಲೇಟ್ ಸಿದ್ಧಪಡಿಸುವ ಜವಾಬ್ದಾರಿ ಹೊತ್ತ ಕಂಪನಿಗಳಿಗೆ ರವಾನೆಯಾಗಿ, ಅವರು ನಂಬರ್ ಪ್ಲೇಟ್ ತಂದುಕೊಡುತ್ತಿದ್ದರು.

ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರು ಹಣ ಪಾವತಿಸಿದ 6 ಗಂಟೆಗಳ ಒಳಗೆ ಈ ಸಮಗ್ರ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿತ್ತು. ಡೀಲರ್​ಗಳು ಸಾರಿಗೆ ಇಲಾಖೆಯನ್ನು, ಸಾರಿಗೆ ಇಲಾಖೆ ಅಧಿಕಾರಿಗಳು ನಂಬರ್ ಪ್ಲೇಟ್ ಮುದ್ರಿಸಿಕೊಡುವ ಕಂಪನಿಗಳನ್ನು ಪರಸ್ಪರ ದೂರುತ್ತಾ ವಿಳಂಬ ಮಾಡುತ್ತಿದ್ದರು. ಮತ್ತೊಂದೆಡೆ ಸರಿಯಾದ ನಂಬರ್ ಪ್ಲೇಟ್ ಇಲ್ಲ ಎನ್ನುವ ಕಾರಣ ಸಂಚಾರ ಪೊಲೀಸರ ದಂಡ ಹಾಕುತ್ತಿದ್ದರು. ಜನರು ರೋಸಿ ಹೋಗಿದ್ದರು.

‘ಸಾರಿಗೆ ಅಧಿಕಾರಿಗಳಿಗೆ ಲಂಚ ಪಡೆಯಲು ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯನ್ನು ದಾರಿ ತಪ್ಪಿಸಲಾಗುತ್ತಿದೆ’ ಎಂದು ಹಲವರು ದೂರಿದ್ದರು. ರಾಜ್ಯದಲ್ಲಿರುವ 1.76 ಕೋಟಿ ಹಳೆಯ ವಾಹನಗಳಿಗೂ ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಬೇಕು ಎನ್ನುವ ಸೂಚನೆ ಇದ್ದ ಕಾರಣ ವಾಹನ ಬಳಕೆದಾರರಲ್ಲಿ ಗೊಂದಲ ಮನೆಮಾಡಿತ್ತು. ಕೊನೆಗೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸರ್ಕಾರವು ಟೆಂಡರ್ ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಕಾರಿನ ನಂಬರ್ ಪ್ಲೇಟ್ ಪ್ರಮಾದ

ಇದನ್ನೂ ಓದಿ: ಗುಜರಿ ನೀತಿ ಜಾರಿ: ಈ ನಗರದಲ್ಲಿ 10-15 ವರ್ಷದ ಹಳೇ ವಾಹನ ರಸ್ತೆಗಿಳಿಯುವಂತಿಲ್ಲ