ಬೆಂಗಳೂರು, ಮಾರ್ಚ್ 12: ಬೆಂಗಳೂರಿನಲ್ಲಿ (Bengaluru) ಆಟೋ ಪ್ರಯಾಣ ದರ (Auto Fare Hike) ಹೆಚ್ಚಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಹೀಗಾಗಿ ಆಟೋ ದರ ಏರಿಕೆ ಬಹುತೇಕ ದೃಢಪಟ್ಟಂತಾಗಿದೆ. ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ದರ ಪರಿಷ್ಕರಣೆಗೆ ಸಮ್ಮತಿಸಲಾಗಿದೆ. ಬಹುತೇಕ ಎಲ್ಲಾ ಆಟೋ ಚಾಲಕ ಸಂಘಟನೆಗಳು ದರ ಏರಿಕೆಗೆ ಸಮ್ಮತಿ ಸೂಚಿಸಿವೆ. ಒಂದು ವಾರದ ವರೆಗೆ ಆಟೋ ಚಾಲಕ ಸಂಘಟನೆಗಳ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿದೆ. ಚಾಲಕ ಸಂಘಟನೆಗಳು ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳು ಎಷ್ಟು ದರ ಏರಿಕೆ ಮಾಡಬೇಕೆಂದು ಘೋಷಣೆ ಮಾಡಲಿದ್ದಾರೆ.
ಆಟೋ ಚಾಲಕ ಸಂಘಟನೆಗಳು ಕನಿಷ್ಠ ದರವನ್ನು 10 ರುಪಾಯಿಯಷ್ಟು ಹೆಚ್ಚಳ ಮಾಡಬೇಕೆಂದು ಈಗಾಗಲೇ ಮನವಿ ಮಾಡಿವೆ. ಸದ್ಯ ನಗರದಲ್ಲಿ ಆಟೋ ಮೀಟರ್ ಕನಿಷ್ಠ ದರ 30 ರೂಪಾಯಿ ಇದೆ. ಅದನ್ನು 40 ರುಪಾಯಿ ವರೆಗೆ ಏರಿಕೆ ಮಾಡಲು ಮನವಿ ಸಲ್ಲಿಕೆಯಾಗಿದೆ.
ಒಂದು ಕಿಲೋಮೀಟರ್ಗೆ 15 ರೂಪಾಯಿ ಇದೆ. ಅದನ್ನು 20 ರೂಪಾಯಿಗೆ ಏರಿಕೆ ಮಾಡಬೇಕು.
ಎರಡು ಕಿಮೀ ಗೆ 40 ರೂಪಾಯಿ ಏರಿಕೆ ಮಾಡಬೇಕು ಎಂದು ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ.
2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.ಇತ್ತ ಆಟೋ ಸಿಎನ್ಜಿ ಒಂದು ಕೆಜಿಗೆ 88 ರೂಪಾಯಿ ಆಗಿದೆ. ಇನ್ನು ಎಲ್ಪಿಜಿ ಕೆಜಿಗೆ 61 ರೂಪಾಯಿ ಆಗಿದೆ. ಹಾಗಾಗಿ ಮೀಟರ್ ದರ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟುಹಿಡಿದಿದ್ದರು.
ಇದನ್ನೂ ಓದಿ: ಟಿಕೆಟ್ ದರ ಏರಿಕೆಯಿಂದ ನಮ್ಮ ಮೆಟ್ರೋಗೆ ಮರಳದ ಪ್ರಯಾಣಿಕರು: ಬೆಂಗಳೂರು ಟ್ರಾಫಿಕ್, ವಾಯುಮಾಲಿನ್ಯ ಹೆಚ್ಚಳ
ಜನವರಿ ತಿಂಗಳಲ್ಲಿ ಕೆಎಸ್ಆರ್ಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಾಗಿತ್ತು. ಫೆಬ್ರುವರಿಯಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಕೂಡ ಏರಿಕೆ ಮಾಡಲಾಗಿತ್ತು. ನಮ್ಮ ಮೆಟ್ರೋ ದರ ಏರಿಕೆಯಿಂದಾಗಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ. ಇದೀಗ ಆಟೋ ದರ ಏರಿಕೆ ಕೂಡ ಖಚಿತವಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
Published On - 1:00 pm, Wed, 12 March 25