ಟಿಕೆಟ್ ದರ ಏರಿಕೆಯಿಂದ ನಮ್ಮ ಮೆಟ್ರೋಗೆ ಮರಳದ ಪ್ರಯಾಣಿಕರು: ಬೆಂಗಳೂರು ಟ್ರಾಫಿಕ್, ವಾಯುಮಾಲಿನ್ಯ ಹೆಚ್ಚಳ
ಮೆಟ್ರೋ ಟಿಕೆಟ್ ದರ ದುಪ್ಪಟ್ಟು ಏರಿಕೆ ಆಗಿದ್ದೇ ಆಗಿದ್ದು, ಮೆಟ್ರೋ ರೈಲಿನಿಂದ ಪ್ರಯಾಣಿಕರು ದೂರವಾಗುತ್ತಿದ್ದಾರೆ. ಇದರ ಎಫೆಕ್ಟ್ ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಮೇಲೆ ತಟ್ಟಿದ್ದು, ನಗರದ ಯಾವ ಜಂಕ್ಷನ್ ನೋಡಿದರೂ ವಾಹನಗಳ ದಟ್ಟಣೆ ಹೆಚ್ಚಾಗಿರುವುದು ಕಾಣಿಸುತ್ತಿದೆ. ಬಿಎಂಆರ್‌ಸಿಎಲ್ ವಿರುದ್ಧ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ಮಾರ್ಚ್ 12: ನಮ್ಮ ಮೆಟ್ರೋ (Namma Metro) ಪ್ರಯಾಣದರವನ್ನು ಬಿಎಂಆರ್‌ಸಿಎಲ್ (BMRCL) ಹೆಚ್ಚಳ ಮಾಡಿ ಮಾರ್ಚ್ 8ಕ್ಕೆ ಒಂದು ತಿಂಗಳು ತುಂಬಿದೆ. ದರ ಏರಿಕೆಯ ಬಿಸಿಯಿಂದ ಮೆಟ್ರೋ ತೊರೆದವರು ಇನ್ನೂ ವಾಪಸ್ಸಾಗಿಲ್ಲ. ಹಾಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಒಂದು ತಿಂಗಳಲ್ಲಿ 40 ಲಕ್ಷದಷ್ಟು ಕಡಿಮೆಯಾಗಿದೆ. ಈ ಭಾನುವಾರ ಅತಿ ಕಡಿಮೆ ಪ್ರಯಾಣಿಕರ ಸಂಖ್ಯೆ ದಾಖಲಾಗಿದ್ದು ,ಶನಿವಾರ ಮತ್ತು ಭಾನುವಾರ ಪ್ರಯಾಣಿಕರ ಸಂಖ್ಯೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಜನವರಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಸರಾಸರಿ 8.5 ಲಕ್ಷ ಜನರು ಸಂಚರಿಸುತ್ತಿದ್ದರು. ಈಗ ಅದು 7.30 ಲಕ್ಷಕ್ಕೆ ಇಳಿದಿದೆ. ವಾರಾಂತ್ಯದ ದಿನಗಳಲ್ಲಿ ಸರಾಸರಿ 7 ಲಕ್ಷ ಇರುತ್ತಿದ್ದ ಪ್ರಯಾಣಿಕರ ಸಂಖ್ಯೆ 5.8 ಲಕ್ಷಕ್ಕೆ ಇಳಿಕೆಯಾಗಿದೆ.
ಮಾರ್ಚ್ 9 ರಂದು ಕೇವಲ 4.70 ಲಕ್ಷ ಜನರು ಮಾತ್ರ ಪ್ರಯಾಣಿಸಿದ್ದಾರೆ. ಜನವರಿ 27 ರಂದು 9.09 ಲಕ್ಷ ಜನರು ಸಂಚರಿಸಿದ್ದು, ಆ ತಿಂಗಳ ಗರಿಷ್ಠ ಸಂಖ್ಯೆಯಾಗಿತ್ತು. ಫೆಬ್ರವರಿ 9ರಂದು ಪರಿಷ್ಕೃತ ದರ ಜಾರಿಯಾಗಿದ್ದು, ಅಲ್ಲಿಂದ ಮಾರ್ಚ್ 8ರವರೆಗಿನ ಒಂದು ತಿಂಗಳಲ್ಲಿ ಮೂರು ಬಾರಿ ಹೊರತುಪಡಿಸಿ 8 ಲಕ್ಷದ ಗಡಿಯನ್ನು ದಾಟಿಲ್ಲ. ದರ ಏರಿಕೆಯಾದ ಮರುದಿನ 8.28 ಲಕ್ಷ ಜನ ಪ್ರಯಾಣಿಸಿದ್ದೇ ಅತಿ ಹೆಚ್ಚು. ಅನಂತರ ಫೆಬ್ರವರಿ 24 ರಂದು 8.02 ಲಕ್ಷ ಮತ್ತು ಮಾರ್ಚ್ 5ರಂದು 8.04 ಲಕ್ಷ ಮಾತ್ರ 8 ಲಕ್ಷ ದಾಟಿತ್ತು.ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಟಿಕೆಟ್ ಏರಿಕೆಗೂ ಮುಂಚೆ ಅಂದರೆ ಜನವರಿಯಲ್ಲಿ 2.49 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, ಫೆಬ್ರವರಿ ಯಲ್ಲಿ 2.09 ಕೋಟಿ, ಫೆಬ್ರವರಿ- 9 ರಿಂದ ಮಾರ್ಚ್- 8 ರ ವರೆಗೆ 1.9 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ.
ವಾಯುಮಾಲಿನ್ಯವೂ ಹೆಚ್ಚಳ
ಕರ್ನಾಟಕ ವಾಯುಮಾಲಿನ್ಯ ಮಂಡಳಿ ನೀಡಿದ ವರದಿಯ ಪ್ರಕಾರ, ನಗರದಲ್ಲಿ ಮಾಲಿನ್ಯ ಮಟ್ಟ ಹೆಚ್ಚಳವಾಗಿದೆ. ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್ ಶುಲ್ಕ ಹೆಚ್ಚಳಕ್ಕೆ ಮುಂಚೆ ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಸರಾಸರಿ ಪಿಎಂ 2.5 ಕಣ ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು.ಅದೇ ಫೆಬ್ರವರಿ 10 ರಂದು 112-114 ಮೈಕ್ರೊ ಗ್ರಾಂಗೆ ಏರಿಕೆಯಾಗಿದೆ. ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ, ಆಸ್ತಮಾದಿಂದ ಕ್ಯಾನ್ಸರ್ ತನಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ನೀವು ಪತ್ರ ಬರೆದರೆ 3 ದಿನಗಳಲ್ಲಿ ಮೆಟ್ರೋ ಟಿಕೆಟ್ ದರ ಇಳಿಕೆ: ಸಿಎಂಗೆ ಬಿಜೆಪಿ ಸಂಸದರ ಭರವಸೆ
ಒಟ್ಟಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ನಂತರ ಪ್ರಯಾಣಿಕರು ದಿನದಿಂದ ದಿನಕ್ಕೆ ಮೆಟ್ರೋ ರೈಲಿನಿಂದ ದೂರವಾಗುತ್ತಿದ್ದಾರೆ. ಇದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಮತ್ತು ವಾಯುಮಾಲಿನ್ಯ ಹೆಚ್ಚಾಗುತ್ತಿರುವುದಂತೂ ಸುಳ್ಳಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 12 March 25