ಬೆಂಗಳೂರು; ನಕಲಿ ನಂಬರ್​ ಪ್ಲೇಟ್‌ ಬಳಸಿ ಫಾಸ್ಟ್ಯಾಗ್ ಖಾತೆಗೆ ಕನ್ನ

ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 15 ರಂದು ಆರೋಪಿ ಉದ್ಯಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಹೆಚ್ಚಿನ ತನಿಖೆಗಾಗಿ ಏಪ್ರಿಲ್ 30 ರೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಲಯ ತಿಳಿಸಿದೆ.

ಬೆಂಗಳೂರು; ನಕಲಿ ನಂಬರ್​ ಪ್ಲೇಟ್‌ ಬಳಸಿ ಫಾಸ್ಟ್ಯಾಗ್ ಖಾತೆಗೆ ಕನ್ನ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 20, 2023 | 9:02 AM

ಬೆಂಗಳೂರು: ಕಾರು ನೋಂದಣಿ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ, ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಬೆಂಗಳೂರು ಪೊಲೀಸರು, ಟೈರ್ ಅಂಗಡಿ ಮಾಲೀಕನ ವಿರುದ್ಧ ಟ್ರಾಫಿಕ್ ಫೈನ್​ ಮತ್ತು ಫಾಸ್ಟ್‌ಟ್ಯಾಗ್ ಬಳಸಿ ಕನ್ನ ಹಾಕಿದ ಆರೋಪದಡಿ ಬಂದಿಸಿದ್ದರು. ಬಳಿಕ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 15 ರಂದು ಉದ್ಯಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಹೆಚ್ಚಿನ ತನಿಖೆಗಾಗಿ ಏಪ್ರಿಲ್ 30 ರೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಲಯ ತಿಳಿಸಿದೆ.

ಹೌದು ತನಿಖೆ ಮಾಡಿದ ಪೊಲೀಸರು ಟೈರ್ ಅಂಗಡಿ ಮಾಲೀಕ ಆರೋಪಿ ಸ್ವಾಮಿನಾಥನ್.ಕೆ (55) ಎಂದು ಗುರುತಿಸಿದ್ದಾರೆ. ಹಿರಿಯ ನಾಗರಿಕರಾದ ಡಾ.ಲಕ್ಷ್ಮೀಪತಯ್ಯ ಹೆಚ್ ಕೆ, 65 ರವರ ಬಿಳಿ ಮಾರುತಿ ಸ್ವಿಫ್ಟ್ ಕಾರಿನ ನೋಂದಣಿ ಸಂಖ್ಯೆ 05 ML 0215 ಯನ್ನು ಯಾರೋ ಬಳಸುತ್ತಿದ್ದಾರೆ ಎಂದು ದೂರಿ, ದಕ್ಷಿಣ ಸಂಚಾರ ಸಹಾಯಕ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ್ದರು. ‘ನನಗೆ ಟ್ರಾಫಿಕ್ ಉಲ್ಲಂಘನೆ ನೋಟಿಸ್‌ಗಳು ಬರುತ್ತಿದ್ದು, ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗದಿದ್ದರೂ ನನ್ನ ಪಾಸ್ಟ್ಯಾಗ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು.

ಇದನ್ನೂ ಓದಿ:IPL 2023: ಲಕ್ಷ ಮೌಲ್ಯದ 16 ಬ್ಯಾಟ್‌, ಶೂ, ಗ್ಲೌಸ್‌ ಕಳ್ಳತನ! ಡೆಲ್ಲಿ ತಂಡದ ನಿದ್ದೆಗೆಡಿಸಿದ ಕಳ್ಳರು

ಈ ಕುರಿತು ತನಿಖೆ ನಡೆಸುವಂತೆ ಸಂಚಾರ ಸಹಾಯಕ ಪೊಲೀಸ್ ಆಯುಕ್ತರು ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್  ಅವರಿಗೆ ಸೂಚಿಸಿದ್ದರು. ಬಳಿಕ ಮಂಜುನಾಥ್ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಹೈವೇಯಲ್ಲಿನ ಟೋಲ್ ಪ್ಲಾಜಾಕ್ಕೆ ಭೇಟಿ ನೀಡುವ ಮೂಲಕ ತನಿಖೆಯನ್ನು ಪ್ರಾರಂಭಿಸಿದ್ದರು. ಆದರೆ ಈ ವೇಳೆ ಯಾವುದೇ ಮಾಹಿತಿ ದೊರೆಯುವುದಿಲ್ಲ. ನಂತರ ಕಾನ್ಸ್‌ಟೇಬಲ್ ಬೆಂಗಳೂರು ಪೊಲೀಸರ ಮೊಬೈಲ್ ಕ್ರೈಮ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್‌ನಲ್ಲಿ ಇದೇ ರೀತಿಯ ಕಾರು ಸಂಖ್ಯೆಗಳನ್ನು ಹುಡುಕುತ್ತಿದ್ದಾಗ, ಬೆಂಗಳೂರು ಸಿಟಿ ಮಾರುಕಟ್ಟೆಯ ಪ್ರದೇಶದಲ್ಲಿ ಟೈರ್ ಮಾರಾಟ ಉದ್ಯಮಿ ಸ್ವಾಮಿನಾಥನ್ ಒಡೆತನದ ಇದೇ ನೋಂದಣಿ ಸಂಖ್ಯೆಯ ಮತ್ತೊಂದು ಮಾರುತಿ ಸ್ವಿಫ್ಟ್ ಕಾರನ್ನು ಪತ್ತೆ ಮಾಡಿದ್ದರು.

ಬಳಿಕ ಲಾಲ್‌ಬಾಗ್ ವೆಸ್ಟ್ ಗೇಟ್ ಬಳಿಯ ಅವರ ವಿಳಾಸಕ್ಕೆ ಭೇಟಿ ನೀಡಿದಾಗ ವಿಳಾಸದಲ್ಲಿ ಹಿರಿಯ ನಾಗರಿಕರ ಕಾರಿನಂತೆಯೇ ಕೆಎ 05 ಎಂಎಲ್ 0215 ನೋಂದಣಿ ಸಂಖ್ಯೆಯ ಬಿಳಿ ಮಾರುತಿ ಸ್ವಿಫ್ಟ್ ಕಾರು ನಿಂತಿರುವುದು ಕಂಡುಬಂದಿದೆ. ಬಳಿಕ ಎಸಿಪಿ ಅವರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ದಕ್ಷಿಣ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಮಾರ್ಚ್ 30 ರಂದು ಸ್ವಾಮಿನಾಥನ್ ಕೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮುಂದಿನ ತನಿಖೆಯಿಂದ ಆರೋಪಿಯು ಉದ್ದೇಶಪೂರ್ವಕವಾಗಿ ತನ್ನ ನಂಬರ್ ಪ್ಲೇಟ್‌ ಕೆಎ 01 ನ್ನು ಕೆಎ 05 ಎಂದು ಬದಲಾಯಿಸಿದ್ದಾನೆ ಎಂದು ತಿಳಿದುಬಂದಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 465, 468, 471 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಇದನ್ನೂ ಓದಿ:ಕಳ್ಳತನ ಆರೋಪ, ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿಹಾಕಿ ಉಸಿರು ನಿಲ್ಲುವವರೆಗೆ ಥಳಿಸಿ, ಆಸ್ಪತ್ರೆಯ ಹೊರಗೆ ಎಸೆದ ಪಾಪಿಗಳು

ಇದೀಗ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 15 ರಂದು ಉದ್ಯಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಹೆಚ್ಚಿನ ತನಿಖೆಗಾಗಿ ಏಪ್ರಿಲ್ 30 ರೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಲಯ ತಿಳಿಸಿದೆ. ಇನ್ನು ಈ ಪ್ರಕರಣದಿಂದ ಬೆಂಗಳೂರು ನಗರದಲ್ಲಿ ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Thu, 20 April 23