ಮಕ್ಕಳ‌ಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ; ಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ

ರಾಜಾಧಾನಿ ಬೆಂಗಳೂರಿನಲ್ಲಿ ಒಂದು ಕಡೆ ಡೆಂಗ್ಯೂ ಜ್ವರ ಕೇಕೆ ಹಾಕುತ್ತಿದೆ.‌ ಮತ್ತೊಂದೆಡೆ ಸದ್ದಿಲ್ಲದೇ ಮಕ್ಕಳಲ್ಲಿ ಕಾಲುಬಾಯಿ ರೋಗ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಮಕ್ಕಳಲ್ಲಿ ಕಾಲುಬಾಯಿ ರೋಗದ ಲಕ್ಷಣಗಳು ಕಂಡುಬಂದರೆ ಶಾಲೆಗಳಿಗೆ ಕಾಳುಹಿಸಲೇಬೇಡಿ ಎಂದು ವೈದ್ಯರು ಹೇಳುತ್ತಿದ್ದಾರೆ. ರೋಗದ ಲಕ್ಷಣಗಳು, ಹರಡುವಿಕೆ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ವೈದ್ಯರು ನೀಡಿದ ಮಾಹಿತಿ ಇಲ್ಲಿದೆ.

ಮಕ್ಕಳ‌ಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ; ಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಮಕ್ಕಳ‌ಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ
Edited By:

Updated on: Jul 04, 2024 | 7:26 AM

ಬೆಂಗಳೂರು, ಜುಲೈ 4: ಬೆಂಗಳೂರಿನಲ್ಲಿ ಈಗ ಡೆಂಗ್ಯೂ ಮಹಾಮಾರಿಯ ಹರಡುವಿಕೆ ತೀವ್ರಗೊಂಡಿರುವುದರ ಜತೆಗೆ, ಮಕ್ಕಳಲ್ಲಿ ಕಾಲುಬಾಯಿ ರೋಗ (Hand-foot-and-mouth disease) ಹೆಚ್ಚಾಗಿ ಹರಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೋಗ ಸಾಮಾನ್ಯವಾಗಿ 10 ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್‌ಸಾಕಿ ವೈರಸ್‌ ದೇಹ ಸೇರುವುದರಿಂದ ಸೋಂಕು ತಗಲುತ್ತದೆ. ಇದು ಲಾಲಾರಸ, ಮಲ, ಉಸಿರಾಟದ ಹಾಗೂ ಸೋಂಕಿತ ಮಗುವಿನ ಸಂಪರ್ಕದ ಮೂಲಕವೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಅತ್ಯಂತ ಸುಲುಭವಾಗಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ.

10 ವರ್ಷದ ಒಳಗಿನ ಮಕ್ಕಳಿಗೆ ಅಪಾಯ ಹೆಚ್ಚು

ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಬರುವ 20 ಜ್ವರದ ಪ್ರಕರಣದಲ್ಲಿ 12 ಪ್ರಕರಣಗಳು ಕಾಲುಬಾಯಿ ರೋಗದ್ದಾಗಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, 10 ವರ್ಷದೊಳಗಿನ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. 10 ವರ್ಷ ಮೇಲ್ಪಟ್ಟವರಲ್ಲಿ ಈ ವೈರಸ್‌ ತೀವ್ರತೆ ಪ್ರಮಾಣ ತುಂಬಾ ಕಡಿಮೆ ಇರಲಿದ್ದು, ಕೆಲವೊಂದು ಶಾಲೆಗಳಲ್ಲಿ ಕಾಲು ಬಾಯಿ ರೋಗವಿದ್ದ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಶಾಲಾ ಶಿಕ್ಷಕರು ಮನವಿ ಮಾಡಿದ್ದಾರೆ.

ಕಾಲುಬಾಯಿ ರೋಗದ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಈ ಸೋಂಕು ಹೆಚ್ಚು ವೇಗವಾಗಿ ಹರಡುತ್ತದೆ. ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಜೊತೆಗೆ ಈ ಸೋಂಕು ಹೆಚ್ಚಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಜೀವಕ್ಕೆ ಕುತ್ತು ತರುವ ಸಾಧ್ಯಾತೆ ಇರುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.‌ ಸಂಜಯ್ ತಿಳಿಸಿದ್ದಾರೆ.

ಕಾಲುಬಾಯಿ ಸೋಂಕಿನ ಲಕ್ಷಣಗಳೇನು?

  • ಸೋಂಕಿಗೆ ಒಳಗಾದ ಮಕ್ಕಳಲ್ಲಿ ಪ್ರಾರಂಭವಾದ 2 ದಿನಗಳ ಕಾಲ ತೀವ್ರ ಜ್ವರ ಇರಲಿದೆ.
  • ಜತೆಗೆ ಬಾಯಿ ಹೊರ ಹಾಗೂ ಒಳಭಾಗದಲ್ಲಿ ಹುಣ್ಣುಗಳು, ಕೈ-ಕಾಲು-ಪಾದ, ಪೃಷ್ಠದ ಮೇಲೆ ಕೆಂಪು ಬಣ್ಣದ ಕೀವಿನಿಂದ ಕೂಡಿದ ದದ್ದುಗಳು, ನೋವು ಹಾಗೂ ತುರಿಕೆ ಸಹ ಇರಲಿದೆ.
  • ಇದು ಗುಣಮುಖವಾಗಲು ಸುಮಾರು 5ರಿಂದ 10ದಿನಗಳು ಬೇಕಾಗುತ್ತದೆ.
  • ಸೊಂಕಿತ ಮಕ್ಕಳ ಕೈ ಹಾಗೂ ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಕೆಮ್ಮು ಸಹ ಇರುತ್ತದೆ.
  • ಸೀನು, ತೀವ್ರ ಜ್ವರ, ಕೆಂಪು ಬಣ್ಣದ ಕೀವಿನಿಂದ ಕೂಡಿದ ದದ್ದು, ಮೈ ಕೈ ನೋವು ಬರುವುದು.

ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬೇಕು?

  • ಕಾಲುಬಾಯಿ ರೋಗಕ್ಕೆ ತುತ್ತಾದ ಮಕ್ಕಳನ್ನು ಗುಣಮುಖರಾಗುವ ವರೆಗೆ ಶಾಲೆಗೆ ಕಳುಹಿಸಬಾರದು.
  • ಕೈ ಸ್ವತ್ಛತೆಗೆ ಗಮನ ಕೊಡಬೇಕು, ಸೋಂಕಿತರಿಂದ ದೂರ ಉಳಿಯಬೇಕು.
  • ಉಪ್ಪು, ಖಾರ, ಮಸಾಲೆ ಪದಾರ್ಥ ನೀಡಲೇಬಾರದು.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಬೆಲೆ ಹೆಚ್ಚಳಕ್ಕೆ ಕಡಿವಾಣ; ಡೆಂಗ್ಯೂ ಪರೀಕ್ಷೆಗೆ ದರ ನಿಗದಿಗೊಳಿಸಿದ ರಾಜ್ಯ ಸರ್ಕಾರ

ಈ ಕಾಲುಬಾಯಿ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ನಿರಂತರವಾಗಿ ಕೈ ಸ್ವಚ್ಛತೆ ಕಾಪಾಡುವುದು ಹಾಗೂ ಸೋಂಕಿತ ಮಕ್ಕಳಿಂದ ದೂರ ಇದ್ದರೆ ರೋಗ ಬಾರದಂತೆ ತಡೆಗಟ್ಟಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 am, Thu, 4 July 24