ಬೆಂಗಳೂರು: ಕರ್ನಾಟಕ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯಬೇಕೆಂದು ಅಂದುಕೊಂಡಿದ್ದೀರಿ? ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕರ್ನಾಟಕದ ಶಾಂತಿಯ ತೋಟವನ್ನು ಹಾಳು ಮಾಡಬೇಡಿ. ಇಲ್ಲಿ ಯಾರೂ ಶಾಶ್ವತವಲ್ಲ. ಕನ್ನಡಿಗರೇ ದಾರಿ ತಪ್ಪಬೇಡಿ ಎಂದು ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ ಈ ಬಗ್ಗೆ ಮನವಿ ಮಾಡಿದ್ದಾರೆ. ಹೊಟ್ಟೆಗೆ ತಿನ್ನೋಕೆ ಏನೂ ಕೊಡದೆ ತಣ್ಣೀರು ಬಟ್ಟೆ ಹಾಕಿದ್ರಿ. ದಲಿತರು ಪೂಜೆ ಮಾಡಲು ಹಿಂದೂ ದೇವಾಲಯಕ್ಕೆ ಬಿಡ್ತೀರಾ? ದೇವಾಲಯಗಳನ್ನು ಕಟ್ಟುವವರು ಹಿಂದುಳಿದವರು, ದಲಿತರು. ದೇವಸ್ಥಾನದೊಳಗೆ ಕೂತು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತನಾಡಿರಲಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದ್ಯಾ, ಏನ್ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೂವರೆ ಕೋಟಿ ಜನರಿಗಾಗಿ ನೀವು ಸರ್ಕಾರ ನಡೆಸಬೇಕಲ್ವಾ? ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದಕ್ಕೆ ಅರೆಸ್ಟ್ ಮಾಡಿದ್ದರು. ಅದೇ ರೀತಿ ಪ್ರಚೋದನೆ ಮಾಡುವವರನ್ನೂ ಅರೆಸ್ಟ್ ಮಾಡಿ. ಪ್ರಚೋದನೆ ಮಾಡುವವರು ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಮೊದಲು ಅವರನ್ನು ಅರೆಸ್ಟ್ ಮಾಡಿ. ಇಂತಹವರು ಈ ದೇಶವನ್ನು ಉಳಿಸುವವರು ಅಲ್ಲವೆಂದು ಕಿಡಿಕಾರಿದ್ದಾರೆ.
ಮತ್ತೊಮ್ಮೆ ಯುವಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದ ಯುವಕರು ಇದಕ್ಕೆ ಬಲಿಯಾಗಬಾರದು. ಇದರಿಂದ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕೃಷಿ ಹೊಂಡಗಳನ್ನು ಯಾಕೆ ನಿಲ್ಲಿಸಿದ್ದೀರಿ; ಸಿದ್ದರಾಮಯ್ಯ ಪ್ರಶ್ನೆ
ಇತ್ತ ರಾಜ್ಯದಲ್ಲಿ ಕೃಷಿ ಹೊಂಡಗಳನ್ನು ಯಾಕೆ ನಿಲ್ಲಿಸಿದ್ದೀರಿ? ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ 2.60 ಲಕ್ಷ ಕೃಷಿ ಹೊಂಡಗಳಿವೆ ಎಂದು ಸಿದ್ದರಾಮಯ್ಯ ಪ್ರಶ್ನೆಗೆ ಸಚಿವ ಬಿ.ಸಿ. ಪಾಟೀಲ್ ಉತ್ತರ ನೀಡಿದ್ದಾರೆ. ಕೃಷಿ ಹೊಂಡಕ್ಕೆ ನರೇಗಾದಲ್ಲಿ ಅವಕಾಶ ಮಾಡಿದ್ದೇವೆ ಎಂಬ ಪಾಟೀಲ್ ಉತ್ತರಕ್ಕೆ ಕಾಂಗ್ರೆಸ್ ಶಾಸಕರ ಆಕ್ಷೇಪ ವ್ಯಕ್ತವಾಗಿದೆ. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಕೃಷಿ ಹೊಂಡಗಳನ್ನು ಮಾಡಬಾರದೆಂಬ ಉದ್ದೇಶ ಅಲ್ಲ. ಕೃಷಿ ಹೊಂಡ ಕೆಲವು ಜಿಲ್ಲೆಗಳಲ್ಲಿ ಜಾಸ್ತಿ, ಕಡಿಮೆಯಾಗಿವೆ. ಮಳೆ ಕಡಿಮೆ ಇರುವ ಕಡೆ ಕೃಷಿ ಹೊಂಡ ಉಪಯುಕ್ತ. ಅವಶ್ಯಕತೆ ಇರುವ ಕಡೆ ಕೃಷಿ ಹೊಂಡ ಪುನರ್ ಪರಿಶೀಲನೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಸಿಎಂ ಉತ್ತರ ನೀಡಿದ್ದಾರೆ.
ಗೊಬ್ಬರ ಸಿಗದೆ ಪರದಾಟವಾಗಿದೆ: ಹೆಚ್.ಡಿ. ಕುಮಾರಸ್ವಾಮಿ
ಸಚಿವ ಬಿ.ಸಿ.ಪಾಟೀಲ್ ಉತ್ತರದ ವೇಳೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಗೊಬ್ಬರ ಬೇರೆ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ. ಓರ್ವ 3 ಲೈಸೆನ್ಸ್ ತಗೊಂಡು ಕೋಟ್ಯಂತರ ರೂ. ಹಗರಣ ಮಾಡಿದ್ದಾರೆ. ಬೇರೆ ಹೆಸರಲ್ಲಿ 3 ಲೈಸೆನ್ಸ್ ಕೊಡಲು ಅವಕಾಶವಿದೆಯಾ? ವಸ್ತುಗಳನ್ನ ರೈತರಿಗೆ ಕೊಟ್ಟಿರುವ ಲೆಕ್ಕ ತೋರಿಸುತ್ತಾರೆ. ಬೇರೆ ರಾಜ್ಯಕ್ಕೆ ಸಪ್ಲೈ ಮಾಡಿರೋ ಬಗ್ಗೆ ದಾಖಲೆ ನೀಡಿದ್ದಾರೆ. ಬೇರೆ ರಾಜ್ಯಕ್ಕೆ ಸಪ್ಲೈ ಮಾಡುವವರ ವಿರುದ್ಧ ಕ್ರಮವಿಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ, ಕೆಲವರ ಮೇಲೆ FIR ಹಾಕಿದ್ದೇವೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ಬೆಲೆ ಬಾಳುವ ಗೊಬ್ಬರ ಬೇರೆ ಜಿಲ್ಲೆಗೆ ಶಿಫ್ಟ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಯೂರಿಯಾ ಸಿಗದ್ದಕ್ಕೆ ಮಹಿಳೆ ಕಣ್ಣೀರು ಹಾಕಿದ್ದಾರೆ. ಯೂರಿಯಾಗಾಗಿ ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದಾರೆ ಎಂದು ಬಳಿಕ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ನಾವು ಕಳ್ಳರು, ಸುಳ್ಳರ ಪರವಾಗಿಲ್ಲ. ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಸು, ಕುರಿ, ಕೋಳಿ ಸಾಕಿದ್ದೇನೆ. ನಮ್ಮ ತೋಟಕ್ಕೆ ಯೂರಿಯಾ ಸಿಕ್ಕಿಲ್ಲ. ನಾನು ಹಸು, ಕುರಿ, ಕೋಳಿ ಗೊಬ್ಬರ ಬಳಸುತ್ತಿದ್ದೇನೆ. ಬಡ ರೈತರ ಸಮಸ್ಯೆ ಬಗೆಹರಿಸಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.
ಇಲಾಖಾವಾರು ಅನುದಾನ ಮತ್ತು ಬೇಡಿಕೆಗಳ ಮೇಲಿನ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರ
ಇಲಾಖಾವಾರು ಅನುದಾನ ಮತ್ತು ಬೇಡಿಕೆಗಳ ಮೇಲಿನ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರ ನೀಡಿದ್ದಾರೆ. 2021-22 ರ ಆರಂಭದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿತ್ತು. 15 ಸಾವಿರ ಕೋಟಿ ಕೊವಿಡ್‌ಗೆ ಖರ್ಚು ಮಾಡಬೇಕಾಯಿತು. ಈ ಎಲ್ಲದರ ನಡುವೆಯೂ ನಾವು ಬಜೆಟ್ ಮಂಡಿಸಿದ್ದೇವೆ. ಐದು ತಿಂಗಳಲ್ಲಿ ಟಾರ್ಗೆಟ್‌ಗಿಂತ ಹೆಚ್ಚು ರಿಸೀವ್ಸ್ ಆಗಿದೆ. ಆರ್ಥಿಕ ಚಟುವಟಿಕೆ ನಿಲ್ಲಿಸದೆ 3ನೇ ಅಲೆ ಎದುರಿಸಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ. ಅಬಕಾರಿ ಇಲಾಖೆಯ ಆದಾಯವನ್ನು ಹೆಚ್ಚಿಸಬೇಕಿದೆ. ಹೀಗಾಗಿ ಕಳ್ಳ ಮಾಲು ತಡೆಗಟ್ಟುವಂತೆ ಸೂಚನೆ ನೀಡಿದ್ದೇನೆ. 2021-22 ರಲ್ಲಿ 67,100 ಕೋಟಿ ಸಾಲ ಪಡೆಯುವ ಅವಕಾಶ ಇದೆ. ಆದರೆ 63,100 ಕೋಟಿ ರೂಪಾಯಿ ಸಾಲ ಮಾಡಿ, ನಾಲ್ಕು ಸಾವಿರ ಕೋಟಿ ಸಾಲ ಮಾಡಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಸಮುದಾಯಗಳ ಮಕ್ಕಳು ತಮ್ಮ ಭಾವನೆಗಳನ್ನು ಬದಿಗಿರಿಸಿ ಪರೀಕ್ಷೆ ಬರೆಯಬೇಕು: ಹೆಚ್ಡಿ ಕುಮಾರಸ್ವಾಮಿ