
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜನರಿಗೆ ಹಬ್ಬದ ಸಂಭ್ರಮಕ್ಕೆ ವರುಣ ತಣ್ಣೀರೆರಚಿದ್ದಾನೆ. ನಿನ್ನೆ (ಅಕ್ಟೋಬರ್ 04) ರಾತ್ರಿ ಸುರಿದ ಭಾರಿ ಮಳೆಗೆ, ರಸ್ತೆಗಳಲ್ಲಿ ನೀರು ಉಕ್ಕಿ ಹರಿದು, ವಾಹನಗಳೆಲ್ಲಾ ಜಲಾವೃತವಾಗಿ, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಚಿಕ್ಕಪೇಟೆಯಲ್ಲಿ ಕಾರು, ಬೈಕ್ಗಳು ಮುಳುಗಡೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸ್ಥಳೀಯರು ಪರದಾಟ ನಡೆಸಿದ್ದಾರೆ. ಕೆಂಗೇರಿ ಉಪನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಚೈತನ್ಯ ಕಾಲೇಜು ಬಳಿಯ ಏರಿಯಾದಲ್ಲಿ ನೀರು ನಿಂತಿತ್ತು. ಬಳಿಕ ಸ್ಥಳೀಯರಿಂದ ನೀರಿನ ತೆರವು ಕಾರ್ಯ ನಡೆದಿದೆ. ಬೆಂಗಳೂರಿನ ಲಾಲ್ಬಾಗ್ ರೋಡ್ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಕಸ್ತೂರಬಾನಗರದ 2ನೇ ಕ್ರಾಸ್ನಲ್ಲಿ ಒಳಚರಂಡಿಗಳು ಬ್ಲ್ಯಾಕ್ ಆಗಿರುವ ಕಾರಣ, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಆಗದೆ ಸಮಸ್ಯೆಯಾಗಿದೆ. ಇದರಿಂದ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಆಹಾರ ಪದಾರ್ಥಗಳು ನೀರುಪಾಲಾಗಿವೆ. ಮನೆಗಳಲ್ಲಿ ಮಂಡಿಯುದ್ದ ನೀರು ಸಂಗ್ರಹವಾಗಿತ್ತು. ಅದನ್ನು ಸ್ಥಳೀಯರು ರಾತ್ರಿಯಿಡೀ ನಿದ್ದೆ ಬಿಟ್ಟು ಪಂಪ್ ಮೂಲಕ ಹೊರಹಾಕಿದ್ದಾರೆ.
ಎಎನ್ಐ ಹಂಚಿಕೊಂಡ ಟ್ವೀಟ್:
ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ವಾರ್ಡ್ ವಾರು ಇಲ್ಲಿದೆ:
ವಿ.ವಿ.ಪುರಂ ವ್ಯಾಪ್ತಿಯಲ್ಲಿ 137 ಮಿಲಿ ಮೀಟರ್ ಮಳೆ, ದೊಡ್ಡ ನೆಕ್ಕುಂದಿಯಲ್ಲಿ 127.5 ಮಿಲಿ ಮೀಟರ್, ಹಂಪಿನಗರ ವ್ಯಾಪ್ತಿಯಲ್ಲಿ 120.2 ಮಿಲಿ ಮೀಟರ್ , ನಾಗರಬಾವಿ ಸುತ್ತಮುತ್ತ 103.5 ಮಿಲಿ ಮೀಟರ್, ನಾಯಂಡಹಳ್ಳಿ ಭಾಗದಲ್ಲಿ 87.5 ಮಿಲಿ ಮೀಟರ್, ಸಂಪಗಿರಾಮನಗರ 63 ಮಿಲಿ ಮೀಟರ್, ಅಗ್ರಹಾರ ದಾಸರಹಳ್ಳಿ 40 ಮಿಲಿ ಮೀಟರ್ ಮಳೆಯಾಗಿದೆ.
ಒಟ್ಟಾರೆ ಬೆಂಗಳೂರು ನಗರದ ಎರಡು ವಲಯಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, ಬೆಂಗಳೂರು ದಕ್ಷಿಣ ವಲಯದಲ್ಲಿ 126 ಮಿ.ಮೀ. ಹಾಗೂ ಮಹದೇವಪುರ ವಲಯದಲ್ಲಿ 125 ಮಿಲಿ ಮೀಟರ್ ಮಳೆಯಾಗಿದೆ.
ಇದನ್ನೂ ಓದಿ:
Karnataka Weather Today: ಕರಾವಳಿ ಸೇರಿ 11 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ