ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆಗಳ ಕಾಲ ಮಳೆ (Rain) ಸಾಧ್ಯತೆಯಿದ್ದು, ಜುಲೈ 19 ರಿಂದ ರಾಜ್ಯದಲ್ಲಿ ಮಳೆ ಪ್ರಮಾಣದಲ್ಲಿ ಇಳಿಕೆ ಸಾಧ್ಯತೆ ಎಂದು ಹವಾಮಾನ ಮಾಹಿತಿ ನೀಡಿದೆ. ಮುಂದಿನ 48 ಗಂಟೆಗಳು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದ್ದು, ಮಂಗಳವಾರದಿಂದ ಕೆಲ ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ನೈಋತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಹಾಗೂ ಹಾಸನ ಜಿಲ್ಲೆಗೆ ಇಂದು ಮತ್ತು ನಾಳೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್, ಕಲಬುರ್ಗಿ ಜಿಲ್ಲೆಗಳಿಗೆ ಜುಲೈ 18 ರಂದು ಯೆಲ್ಲೊ ಅಲರ್ಟ್ ನೀಡಲಾಗಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಳವಾಗುವ ಸಾಧ್ಯತೆಯಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40 ಕಿ.ಮೀ ನಿಂದ 50 ಕಿ.ಮೀ ಇದೆ. ಈ ವೇಗವು 48 ಗಂಟೆಗಳ ಅವಧಿಯಲ್ಲಿ 60 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆಯ ಪ್ರಮಾಣ:
ನಿನ್ನೆ ಬೆಂಗಳೂರು ನಗರದಲ್ಲಿ 4.7 ಮಿ.ಮೀ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ 12.1 ಮಿ.ಮೀ, ಹೆಚ್ಎಎಲ್ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ 8.0 ಮಿ.ಮೀ ಮಳೆಯಾಗಿದೆ. ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ಮುಂದಿನ 48 ಗಂಟೆಗಳು ಮುಂದುವರೆಯಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Published On - 11:11 am, Sun, 17 July 22