ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ನಸುಕಿನಲ್ಲಿ ವಿವಿಧೆಡೆ ಭಾರಿ ಮಳೆಯಾಗಿದ್ದು ರಸ್ತೆಗಳ ಮೇಲೆ ನೀರು ಹರಿಯಿತು. ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ಗಳನ್ನು ಹಿಡಿಯಲು ಮಾಲೀಕರು ಹರಸಾಹಸಪಟ್ಟರು. ಶಿವಾಜಿನಗರದ ಓಲ್ಡ್ ಮಾರ್ಕೆಟ್ ರಸ್ತೆಯ ಪ್ಯಾಲೇಸ್ ಮಹಲ್ ಬಳಿ ಹಲವು ಬೈಕ್ಗಳು ನೀರುಪಾಲಾಗಿವೆ. ಬನಶಂಕರಿಯ ಪ್ರಗತಿಪುರ ಬಡಾವಣೆಯ ಮನೆಗಳಿಗೆ ಮೋರಿ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಮನೆಗಳಿಂದ ನೀರು ಹೊರಹಾಕಲು ನಿವಾಸಿಗಳ ಹರಸಾಹಸಪಟ್ಟರು. ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದರು.
ಶೇಷಾದ್ರಿಪುರಂ ಮೆಟ್ರೋ ಸುರಂಗದ ತಡೆಗೋಡೆ ಕುಸಿದು 7 ಕಾರು, 2 ಬೈಕ್ ಜಖಂಗೊಂಡಿವೆ. ಕಾರಿನಲ್ಲಿ ಕುಳಿತಿದ್ದ ನಾಗಭೂಷಣ್, ಆನಂದ್ ಅಪಾಯದಿಂದ ಪಾರಾಗಿದ್ದಾರೆ. ಕಳಪೆ ಕಾಮಗಾರಿ ಹಾಗೂ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಬಿಎಂಆರ್ಸಿಎಲ್ ಅಧಿಕಾರಿಗಳೇ ನಷ್ಟ ಭರಿಸಬೇಕೆಂದು ವಾಹನ ಮಾಲೀಕರು ಒತ್ತಾಯಿಸಿದ್ದಾರೆ. ಈ ಕಾಂಪೌಂಡ್ ಅನ್ನು ಮೆಟ್ರೋ ಅಧಿಕಾರಿಗಳೇ ಮುಂದೆ ನಿಂತು ಕಟ್ಟಿಸಿದ್ದರು. ಕೇವಲ ಹಾಲೋಬ್ರಿಕ್ಸ್ ಮತ್ತು ಇಟ್ಟಿಗೆಗಳಿಂದ ತಾತ್ಕಾಲಿಕ ತಡೆಗೋಡೆ ಕಟ್ಟಿಸಲಾಗಿದೆ. ಸಿಮೆಂಟ್ ಪ್ಲಾಸ್ಟಿಂಗ್ ಆಗಿಲ್ಲ. ಕಾಂಪೌಂಡ್ ಕುಸಿದಿರುವ ಬಗ್ಗೆ ಮಾಹಿತಿ ನೀಡಿದರೂ ಯಾರೂ ಬಂದಿಲ್ಲ ಎಂದು ಮೆಟ್ರೋ ನಿಗಮದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪೂರ್ವ, ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ಉತ್ತರದಲ್ಲಿರುವ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಕೆಲವೇ ಗಂಟೆಗಳಲ್ಲಿ 5.9 ಸೆಂಮೀ ಮಳೆಯಾಗಿದೆ. ನಗರದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದೆ. ಮಳೆಯಿಂದಾಗಿ ಬುಧವಾರ ರಾತ್ರಿ ಶಾಂತಿನಗರ, ವಿಲ್ಸನ್ಗಾರ್ಡನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಸೇಂಟ್ ಜೋಸೆಫ್ ಕಾಲೇಜು ಬಳಿ ರಸ್ತೆಗಳು ಜಲಾವೃತಗೊಂಡು ಫುಟ್ಪಾತ್ ಮಟ್ಟಕ್ಕೆ ನೀರು ಹರಿಯಿತು.
#Heavy #rains in #Bengaluru: Areas like #Mahadevapura & #East recorded 60-80 mm rain. #Motorists trying to stop their bikes from getting washed away…scene in Shivajinagar ?#bangalorerains @NammaBengaluroo @TOIBengaluru @WFRising @Namma_ORRCA @MTF_Mobility @namma_BTM pic.twitter.com/Wo4q2RU3Q6
— Rakesh Prakash (@rakeshprakash1) October 19, 2022
ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರು ಸರಾಗವಾಗಿ ಹರಿದು ಹೋಗಲೆಂದು ಹಲವೆಡೆ ಮ್ಯಾನ್ಹೋಲ್ಗಳನ್ನು ತೆರೆದಿಡಲಾಯಿತು. ಹಲವು ಕಟ್ಟಡಗಳಲ್ಲಿ ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡವು. ಸಂಜೆ 7.30ರ ಹೊತ್ತಿಗೆ ಮಳೆ ಬಿರುಸಾದ ಕಾರಣ ದ್ವಿಚಕ್ರ ವಾಹನಗಳಲ್ಲಿ ಮನೆಗಳಿಗೆ ಹೊರಟಿದ್ದವರು ಅಲ್ಲಲ್ಲಿ ನಿಂತುಬಿಟ್ಟರು. ಬಹುತೇಕ ಮೆಟ್ರೋ ನಿಲ್ದಾಣಗಳ ಕೆಳಗೆ ವಾಹನದಟ್ಟಣೆ ಇತ್ತು.
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಮಳೆ ದಾಖಲಾಗಿರುವ ವರ್ಷ 2017. ಆಗ ನಗರದಲ್ಲಿ ಒಟ್ಟು 1,696 ಮಿಮೀ (169 ಸೆಂಮೀ) ಮಳೆಯಾಗಿತ್ತು. ಈ ವರ್ಷ ನಗರದಲ್ಲಿ ಈಗಾಗಲೇ 1,706 (170 ಸೆಂಮೀ) ಮಿಮೀ ಮಳೆಯಾಗಿದ್ದು, ದಾಖಲೆ ಬರೆದಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಇನ್ನೂ 4 ದಿನ ಭಾರೀ ಮಳೆ ಸಾಧ್ಯತೆ
Published On - 7:26 am, Thu, 20 October 22