ಬೆಂಗಳೂರು, ಆಗಸ್ಟ್ 1: ಪೀಣ್ಯ ಮೇಲ್ಸೇತುವೆ ಮೇಲೆ ಕಳೆದ ಸೋಮವಾರದಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಫ್ಲೈ ಓವರ್ ನಿರ್ವಹಣೆಗಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ರ ವರೆಗೆ ಭಾರಿ ವಾಹನಗಳಿಗೆ ಅವಕಾಶ ನೀಡ್ತಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮತ್ತೆ ಮತ್ತೆ ನಿರ್ವಹಣೆ ಅಂದರೆ ಏನು ಅರ್ಥ? ಹಾಗಾದರೆ ಸಂಪೂರ್ಣವಾಗಿ ಫ್ಲೈ ಓವರ್ ದುರಸ್ತಿ ಕಾರ್ಯ ಆಗಿಲ್ಲವೇ? ಮತ್ತೆ ಫ್ಲೈ ಓವರ್ ಕ್ಲೋಸ್ ಮಾಡುತ್ತಾರೆಯೇ ಎಂಬ ಪ್ರಶ್ನೆ ಗಳನ್ನು ಹುಟ್ಟು ಹಾಕಿದೆ. ಪ್ರತಿ ಶುಕ್ರವಾರ ಹಾಕಿರುವ ಕೇಬಲ್ಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ 1243 ಹೊಸ ಕೇಬಲ್ಗಳನ್ನು ಹಾಕಲಾಗಿದೆ. ಘನ ವಾಹನಗಳ ಸಂಚಾರದಿಂದ ಹೊಸದಾಗಿ ಹಾಕಿರುವ ಕೇಬಲ್ಗಳ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ.
ಪರೀಕ್ಷಾ ಹಂತದಲ್ಲೇ ಘನ ವಾಹನ ಸಂಚಾರ ಆರಂಭಿಸಿದ್ದಾರೆ. ಮುಂದೆ ಸಂಚಾರ ನಿಷೇಧ ಹೇರುವ ಸಾಧ್ಯತೆಯೂ ಇದೆ ಎಂದು ಫ್ಲೈಓವರ್ ತಜ್ಞ ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ.
ಶೇ 100 ರಷ್ಟು ಕಾಮಗಾರಿ ಮುಗಿದಿಲ್ಲ. ಫ್ಲೈಓವರ್ ಮೇಲೆ ಹೆವಿ ವೆಹಿಕಲ್ ಸಂಚಾರ ಸದ್ಯಕ್ಕೆ ಬೇಡವಾಗಿತ್ತು. ಶುಕ್ರವಾರ ಫ್ಲೈಓವರ್ ನಿರ್ವಹಣೆ ಎಂದು ಸಂಚಾರ ಬಂದ್ ಮಾಡುತ್ತಾರೆ ಅಂದರೆ, ಮತ್ತೆ ಒಂದೆರಡು ತಿಂಗಳಲ್ಲೇ ಫ್ಲೈಓವರ್ ಸಂಚಾರ ಬಂದ್ ಮಾಡಿದರೆ ಎಂದು ವಾಹನ ಸವಾರರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು
ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಲ್ಲವೂ ಸರಿ ಆಗಿದೆ ಎಂದು ಘನ ವಾಹನ ಸಂಚಾರಕ್ಕೂ ಅವಕಾಶ ನೀಡಿದೆ. ಆದರೆ, ಮತ್ತೆ ಸಂಚಾರ ಬಂದ್ ಮಾಡುವ ಅನುಮಾನ ದಟ್ಟವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ