AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಿಎಂ ಎಸ್​​.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಶಿಕ್ಷಣ ಪಡೆದಿದ್ದ ಐತಿಹಾಸಿಕ ಕಾನೂನು ಕಾಲೇಜಿನ ಪಾರಂಪರಿಕ ಕಟ್ಟಡ ನೆಲಸಮ

ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಹಾಗೂ ನ್ಯಾಯಮೂರ್ತಿಗಳು ವ್ಯಾಸಂಗ ಮಾಡಿದ್ದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿಯ ಐತಿಹಾಸಿಕ ಸರ್ಕಾರಿ ಕಾನೂನು ಕಾಲೇಜಿನ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಲಾಗಿದ್ದು, ವಕೀಲರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಧ್ವಂಸಗೊಳಿಸಲಾದ ಪಾರಂಪರಿಕ ಕಟ್ಟಡವನ್ನು ಅದೇ ಸ್ಥಳದಲ್ಲಿ, ಮೂಲ ವಾಸ್ತುಶಿಲ್ಪದ ವಿನ್ಯಾಸ ಮತ್ತು ಪಾರಂಪರಿಕ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಮರುನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಮಾಜಿ ಸಿಎಂ ಎಸ್​​.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಶಿಕ್ಷಣ ಪಡೆದಿದ್ದ ಐತಿಹಾಸಿಕ ಕಾನೂನು ಕಾಲೇಜಿನ ಪಾರಂಪರಿಕ ಕಟ್ಟಡ ನೆಲಸಮ
ಕಟ್ಟಡ ನೆಲಸಮ ಮಾಡಿರುವುದುImage Credit source: The Hindu
ಪ್ರಸನ್ನ ಹೆಗಡೆ
|

Updated on:Nov 16, 2026 | 11:41 AM

Share

ಬೆಂಗಳೂರು, ನವೆಂಬರ್​​ 16: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್​​.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಸೇರಿ ಅನೇಕ ಪ್ರಮುಖರು ಶಿಕ್ಷಣ ಪಡೆದಿದ್ದ ಮೈಸೂರು ಬ್ಯಾಂಕ್ ವೃತ್ತದ ಸಮೀಪದ ಐತಿಹಾಸಿಕ ಕಾನೂನು ಕಾಲೇಜಿನ ಪಾರಂಪರಿಕ ಕಟ್ಟಡ ನೆಲೆಸಮಗೊಳಿಸಲಾಗಿದೆ. ಐತಿಹಾಸಿಕ, ವಾಸ್ತುಶಿಲ್ಪ ಮತ್ತು ಕಾನೂನು ಕ್ಷೇತ್ರದ ದೃಷ್ಟಿಯಿಂದ ಅಪಾರ ಮಹತ್ವ ಹೊಂದಿದ್ದ ಈ ಕಟ್ಟಡದಲ್ಲಿ ಈ ಹಿಂದೆ ಪ್ರತಿಷ್ಠಿತ ಸರ್ಕಾರಿ ಕಾನೂನು ಕಾಲೇಜು (ನಂತರ ವಿಶ್ವವಿದ್ಯಾಲಯ ಕಾನೂನು ಕಾಲೇಜು) ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರವೂ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಐದು ವರ್ಷಗಳ ಕಾನೂನು ಕೋರ್ಸ್ ವಕೀಲರ ಸಂಘದಿಂದ ತೀವ್ರ ಖಂಡನೆ

ಇನ್ನು ಐತಿಹಾಸಿಕ ಕಾನೂನು ಕಾಲೇಜಿನ ಪಾರಂಪರಿಕ ಕಟ್ಟಡ ಧ್ವಂಸಕ್ಕೆ ಐದು ವರ್ಷಗಳ ಕಾನೂನು ಕೋರ್ಸ್ ವಕೀಲರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಐದು ವರ್ಷಗಳ ಕಾನೂನು ಕೋರ್ಸ್ ವಕೀಲರ ಸಂಘದ ಅಧ್ಯಕ್ಷ ಎಸ್. ಉಮೇಶ್ ಅವರು ಈ ಧ್ವಂಸ ಕಾರ್ಯವನ್ನು ಕ್ಷಮಿಸಲಾಗದ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ವಿಧ್ವಂಸಕ ಕೃತ್ಯ ಎಂದು ಬಣ್ಣಿಸಿದ್ದಾರೆ. ಕರ್ನಾಟಕದಲ್ಲಿ ತಲೆಮಾರುಗಳ ಕಾಲ ಕಾನೂನು ಶಿಕ್ಷಣದ ಪ್ರಮುಖ ಕೇಂದ್ರವಾಗಿದ್ದ ಈ ಕಟ್ಟಡವು ದೇಶದ ಹಲವು ಪ್ರತಿಷ್ಠಿತ ನ್ಯಾಯಶಾಸ್ತ್ರಜ್ಞರು, ರಾಜಕಾರಣಿಗಳು ಮತ್ತು ಉನ್ನತ ಆಡಳಿತಾಧಿಕಾರಿಗಳ ವೃತ್ತಿಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹೆಬ್ಬಾಳ ಸುರಂಗ ರಸ್ತೆ: 1,128 ಮರಗಳಿಗೆ ಬೀಳಲಿದೆ ಕೊಡಲಿ ಏಟು, ಪಕ್ಷಿ ಸಂಕುಲಕ್ಕೂ ಕುತ್ತು, ಬೆಂಗಳೂರು ತಾಪಮಾನ ಏರಿಕೆ ಸಾಧ್ಯತೆ

ಕರ್ನಾಟಕ ಮತ್ತು ಭಾರತದ ಕಾನೂನು ಹಾಗೂ ರಾಜಕೀಯ ನಾಯಕತ್ವವನ್ನು ರೂಪಿಸಿದ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡವನ್ನು ಧ್ವಂಸಗೊಳಿಸಿರುವುದು ಕಾನೂನು ಸಮುದಾಯ ಮತ್ತು ಬೆಂಗಳೂರಿನ ನಾಗರಿಕರಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ, ಗೌರವಿಸಬೇಕೇ ಹೊರತು ಅವುಗಳನ್ನು ನೆಲಸಮ ಮಾಡಬಾರದು ಎಂದು ಉಮೇಶ್ ಹೇಳಿದ್ದಾರೆ.

ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು

  • ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ – ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ
  • ಎಸ್.ಎಂ. ಕೃಷ್ಣ – ಕರ್ನಾಟಕದ ಮಾಜಿ ಮುಖ್ಯಮಂತ್ರಿ
  • ಎಂ. ವೀರಪ್ಪ ಮೊಯ್ಲಿ – ಕರ್ನಾಟಕದ ಮಾಜಿ ಮುಖ್ಯಮಂತ್ರಿ
  • ರಾಮಲಿಂಗಾರೆಡ್ಡಿ – ಕರ್ನಾಟಕ ಸರ್ಕಾರದ ಸಚಿವರು
  • ಎಚ್.ಎಂ. ರೇವಣ್ಣ – ಕರ್ನಾಟಕ ಸರ್ಕಾರದ ಮಾಜಿ ಸಚಿವರು
  • ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ – ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ರಾಜ್ಯ ಸರ್ಕಾರಕ್ಕೆ ಸಂಘದ ಪ್ರಮುಖ ಆಗ್ರಹಗಳು

ಧ್ವಂಸಗೊಳಿಸಲಾದ ಪಾರಂಪರಿಕ ಕಟ್ಟಡವನ್ನು ಅದೇ ಸ್ಥಳದಲ್ಲಿ, ಮೂಲ ವಾಸ್ತುಶಿಲ್ಪದ ವಿನ್ಯಾಸ ಮತ್ತು ಪಾರಂಪರಿಕ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಮರುನಿರ್ಮಿಸಬೇಕು. ಈ ಘಟನೆ ಕುರಿತು ತಕ್ಷಣ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಕಟ್ಟಡ ಧ್ವಂಸಕ್ಕೆ ಅನುಮತಿ ನೀಡಿದ ಮತ್ತು ಅದನ್ನು ಕಾರ್ಯಗತಗೊಳಿಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:41 am, Mon, 16 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More