AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾಳ ಸುರಂಗ ರಸ್ತೆ: 1,128 ಮರಗಳಿಗೆ ಬೀಳಲಿದೆ ಕೊಡಲಿ ಏಟು, ಪಕ್ಷಿ ಸಂಕುಲಕ್ಕೂ ಕುತ್ತು, ಬೆಂಗಳೂರು ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರಸ್ತಾಪಿತ 2.22 ಕಿ.ಮೀ ಉದ್ದದ ಶಾರ್ಟ್ ಟನಲ್ ಯೋಜನೆಯಿಂದ 1,128 ಮರಗಳು ಹಾಗೂ 92 ಪ್ರಭೇದಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ ಎಚ್ಚರಿಸಿದೆ. ಪರಿಣಾಮವಾಗಿ ಪಕ್ಷಿ ಸಂಕುಲದ ಅಳಿವು, ಬೆಂಗಳೂರಿನ ತಾಪಮಾನ ಏರಿಕೆ ಸಾಧ್ಯತೆಯೂ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಹೆಬ್ಬಾಳ ಸುರಂಗ ರಸ್ತೆ: 1,128 ಮರಗಳಿಗೆ ಬೀಳಲಿದೆ ಕೊಡಲಿ ಏಟು, ಪಕ್ಷಿ ಸಂಕುಲಕ್ಕೂ ಕುತ್ತು, ಬೆಂಗಳೂರು ತಾಪಮಾನ ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Nov 16, 2026 | 11:24 AM

Share

ಮುಖ್ಯಾಂಶಗಳು

  • ಹೆಬ್ಬಾಳ ಟನಲ್ ಯೋಜನೆಯಿಂದ 1,128 ಮರಗಳಿಗೆ ಕುತ್ತು
  • 92 ಪ್ರಭೇದಗಳ ಮರಗಳ ಮೇಲೆ ಯೋಜನೆಯ ಪರಿಣಾಮ
  • ಬೆಂಗಳೂರು ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರು, ನವೆಂಬರ್ 16: ಹೆಬ್ಬಾಳದಲ್ಲಿ ಪ್ರಸ್ತಾಪಿತ 2.22 ಕಿ.ಮೀ. ಉದ್ದದ ಸಣ್ಣ ಸುರಂಗ ಮಾರ್ಗ ಯೋಜನೆಯಿಂದ 92 ಪ್ರಭೇದಗಳ 1,128 ಮರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸ್ವತಂತ್ರ ಅಧ್ಯಯನ ವರದಿಯೊಂದು ತಿಳಿಸಿದೆ. ಇವುಗಳಲ್ಲಿ ಬೆಳೆದು ನಿಂತ ಆಲ, ಅತ್ತಿ ಮತ್ತು ರೇನ್ ಟ್ರೀಗಳೂ ಸೇರಿವೆ. ಹೆಚ್ಚಿನ ಮರಗಳನ್ನು ಸ್ಥಳಾಂತರಿಸುವುದರಿಂದ ಅವುಗಳ ಪರಿಸರ ಪ್ರಯೋಜನ ಹಾಗೂ ಬೆಂಗಳೂರಿನಲ್ಲಿ ಪರಿಸರದ ಮೇಲಿನ ಪ್ರಭಾವ ಹಾಗೆಯೇ ಉಳಿಯುವುದು ಸಾಧ್ಯವೇ ಎಂದು ವರದಿ ಪ್ರಶ್ನಿಸಿದೆ.

ಅಧ್ಯಯನ ನಡೆಸಿದವರು ಯಾರು?

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರಾದ ಹರಿಣಿ ನಾಗೇಂದ್ರ, ಸೀಮಾ ಮುಂಡೋಲಿ, ಪ್ರಾಚಿ ಗುಪ್ತಾ ಮತ್ತು ವಿವೇಕ್ ಜಿ. ಈ ವರದಿ ಸಿದ್ಧಪಡಿಸಿದ್ದಾರೆ. ಅವರು 2026ರ ಅಕ್ಟೋಬರ್ 21ರಂದು ಸ್ಥಳ ಪರಿಶೀಲನೆ ನಡೆಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಕಟಿಸಿದ್ದ ಮರಗಳ ಪಟ್ಟಿಯನ್ನೂ ಪರಿಶೀಲಿಸಿ ದೃಢಪಡಿಸಿಕೊಂಡಿದ್ದಾರೆ.

ಯಾವ ಮರಗಳಿಗೆ ಹೆಚ್ಚು ಆಪತ್ತು?

ತೆರವಿಗೆ ಗುರುತಿಸಲಾದ ಮರಗಳಲ್ಲಿ ಕಾಗದ ಮಲ್ಬೆರಿ (ಪೇಪರ್ ಮಲ್ಬೆರಿ) ಅತಿ ಹೆಚ್ಚು, ಅಂದರೆ 173 ಇವೆ. ನಂತರದ ಸ್ಥಾನಗಳಲ್ಲಿ ಹೊಂಗೆ (67), ಸೀಮೆ ಹುಣಸೆ (63), ಗುಲ್‌ಮೊಹರ್ (57), ಹಳದಿ ಕಾಪರ್‌ಪಾಡ್ (45) ಮತ್ತು ರೇನ್ ಟ್ರೀ (30) ಇವೆ. ವಿಶಾಲವಾಗಿ ಹರಡಿದ ನೆರಳು ನೀಡುವ ರೇನ್ ಟ್ರೀಗಳು ನಗರದ ಉಷ್ಣತೆ ತಗ್ಗಿಸಲು ನೆರವಾಗುತ್ತವೆ ಎಂದು ವರದಿ ಹೇಳಿದೆ.

ಸ್ಥಳಾಂತರದ ಬಗ್ಗೆ ಸಂಶೋಧಕರ ಆತಂಕ

ಯೋಜನೆ ಜಾರಿ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), 1,128 ಮರಗಳ ತೆರವಿಗೆ ಅನುಮತಿ ಕೋರಿದೆ. ಇವುಗಳಲ್ಲಿ ಹೆಚ್ಚಿನವನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದೆ. ಆದರೆ ಸ್ಥಳಾಂತರದ ವೇಳೆ ಮರಗಳ ಕೊಂಬೆಗಳನ್ನು ತೀವ್ರವಾಗಿ ಕತ್ತರಿಸಿ ಮೂಲ ಗಾತ್ರದ ಒಂದು ಭಾಗಕ್ಕೆ ಇಳಿಸಬೇಕಾಗುತ್ತದೆ. ಇದರಿಂದ ಅವುಗಳ ಪರಿಸರ ಪ್ರಯೋಜನ ಕಡಿಮೆಯಾಗುತ್ತದೆ. ಸ್ಥಳಾಂತರದ ನಂತರ ಅವು ಬದುಕುಳಿಯುವ ಬಗ್ಗೆಯೂ ಖಚಿತತೆ ಇಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

1,500ಕ್ಕೂ ಹೆಚ್ಚು ಆಕ್ಷೇಪಣೆ

ಮರಗಳ ತೆರವಿಗೆ ವಿರೋಧ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವರದಿ ಪ್ರಕಟವಾಗಿದೆ. ಈ ಪ್ರಸ್ತಾವದ ವಿರುದ್ಧ ಜಿಬಿಎಗೆ 1,500ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಪಕ್ಷಿ ಸಂಕುಲದ ಅಳಿವು-ಉಳಿವಿನ ಪ್ರಶ್ನೆ

ಹೆಬ್ಬಾಳದ ಆಸುಪಾಸಿನಲ್ಲಿ 199 ಪಕ್ಷಿ ಪ್ರಭೇದಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ. ಇವುಗಳಲ್ಲಿ ಅಳಿವಿನಂಚಿನ ಅಪಾಯದಲ್ಲಿರುವ ದೊಡ್ಡ ಚುಕ್ಕೆ ಹದ್ದು, ಚುಕ್ಕೆ ಕೊಕ್ಕಿನ ಪೆಲಿಕನ್, ಜೊತೆಗೆ ಭಾರತೀಯ ನವಿಲು ಮತ್ತು ನೀಲಕಂಠ ಪಕ್ಷಿಗಳು ಸೇರಿವೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಕೃಷಿ ವಿಶ್ವವಿದ್ಯಾಲಯ ಮತ್ತು ಹೆಬ್ಬಾಳ ಕೆರೆ ಸುತ್ತಲಿನ ಹಸಿರು ಪ್ರದೇಶಗಳು ಉತ್ತರ ಬೆಂಗಳೂರಿನ ಮುಖ್ಯ ಪರಿಸರ ಜಾಲವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ಮಹಾತ್ಮ ಗಾಂಧೀಜಿಯೂ ಉಳಿದುಕೊಂಡಿದ್ದ ಕುಮಾರಕೃಪಾ ಗೆಸ್ಟ್ ಹೌಸ್! 160 ವರ್ಷಗಳ ಕಟ್ಟಡಕ್ಕೆ ಆ ಹೆಸರು ಬಂದಿದ್ಹೇಗೆ? ಇಲ್ಲಿದೆ ಮಾಹಿತಿ

ಇಲ್ಲಿ ಇನ್ನಷ್ಟು ಹಳೆಯ ಮರಗಳು ಕಳೆದುಹೋದರೆ ತಾಪಮಾನ ಏರಿಕೆ, ಮಾಲಿನ್ಯ ಮತ್ತು ಜೀವವೈವಿಧ್ಯ ನಷ್ಟ ಹೆಚ್ಚಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More