
ಬೆಂಗಳೂರು, ಜನವರಿ 05: ಸಂಧ್ಯಾ ಥಿಯೇಟರ್‌ನ (Sandhya Theatre) ಬಾತ್ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಮೇರೆಗೆ ಥಿಯೇಟರ್ ಹಾಗೂ ಸಿಬ್ಬಂದಿ ರಾಜೇಶ್, ಕಮಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಮಡಿವಾಳ ಪೊಲೀಸರಿಂದ ವಿಚಾರಣೆ ನಡೆದಿದೆ.
ರವಿವಾರದಂದು ಮಹಿಳಾ ಟೆಕ್ಕಿಯೊಬ್ಬರು ಸ್ನೇಹಿತರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್‌ಗೆ ಹೋಗಿದ್ದರು. ಇಂಟರ್ವೆಲ್ ವೇಳೆ ವಾಶ್ ರೂಂಗೆ ಹೋದಾಗ ಮಹಿಳಾ ಟೆಕ್ಕಿ ಹಾಗೂ ಸ್ನೇಹಿತೆಯರ ಖಾಸಗಿ ವಿಡಿಯೋವನ್ನು ರಾಜೇಶ್ ಎಂಬಾತ ಚಿತ್ರೀಕರಣ ಮಾಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಮಡಿವಾಳ ಸಂಧ್ಯಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಯುವಕ, ಯುವತಿಯರು ಶಾಕ್
ಮಹಿಳಾ ಟೆಕ್ಕಿ ಆರೋಪಿಯನ್ನ ಹಿಡಿದು ಮಾಲೀಕರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಕಮಲ್ ಎಂಬಾತ ವಿಡಿಯೋ ಮಾಡಲು ಹೇಳಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಆತನ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಖಾಸಗಿ ವಿಡಿಯೋಗಳ ಚಿತ್ರೀಕರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದೂರುದಾರೆ ಮತ್ತು ಅವರ ಸ್ನೇಹಿತೆಯರು ಬೆಂಗಳೂರಿನ ಮಡಿವಾಳಾದ ವಿ.ಪಿ. ರಸ್ತೆಯಲಿರುವ ಸಂಧ್ಯಾ ಥಿಯೇಟರ್‌ಗೆ “ನೂವು ನಾಕು ನಚ್ಚಾವು” ಸಿನಿಮಾವನ್ನು ರಾತ್ರಿ 7 ರಿಂದ 10 ಗಂಟೆಯ ಸಮಯದಲ್ಲಿ ವೀಕ್ಷಿಸಲು ಹೋಗಿದ್ದು, ವಿರಾಮದ ಸಮಯದಲ್ಲಿ ಸುಮಾರು ರಾತ್ರಿ 8:30 ಗಂಟೆಗೆ, ದೂರುದಾರೆ ಮತ್ತು ಅವರ ಸ್ನೇಹಿತೆಯರು ಥಿಯೇಟರ್ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ, ಅಲ್ಲಿ ಮಹಿಳಾ ಶೌಚಾಲಯದ ಮಧ್ಯದಲ್ಲಿ, ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಬಳಸಿ ವಿಡಿಯೋ ತೆಗೆಯುತ್ತಿರುವುದನ್ನು ನೋಡಿ, ತಕ್ಷಣ ತಮ್ಮ ಗಂಡನಿಗೆ ಕರೆ ಮಾಡಿ, ಆ ವ್ಯಕ್ತಿಯನ್ನು ಹಿಡಿದುಕೊಂಡು, ಅವರ ಫೋನ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ದೂರುದಾರೆ ಮತ್ತು ಅವರ ಸ್ನೇಹಿತೆಯರ ಖಾಸಗಿ ವಿಡಿಯೋಗಳು ಇರುವುದು ಕಂಡುಬಂದಿದೆ.
ಇದನ್ನೂ ಓದಿ: ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು
ಸಂಧ್ಯಾ ಥಿಯೇಟರ್‌ನ ಮ್ಯಾನೆಜ್ಮೆಂಟ್ನವರನ್ನು ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತ ಸುಮಾರು ಒಂದು ತಿಂಗಳಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದು, ಆತನ ಹೆಸರು ರಾಜೇಶ್ ಎಂದು ತಿಳಿಸಿದ್ದಾರೆ. ನಂತರ ವಿಡಿಯೋಗಳನ್ನು ತೆಗೆಯಲು ಯಾರು ಸೂಚನೆ ನೀಡಿದರು ಎಂದು ದೂರುದಾರೆ ರಾಜೇಶ್ನನ್ನು ಕೇಳಿದಾಗ, ಕಮಲ್ ಎಂಬ ವ್ಯಕ್ತಿ ಹೆಸರನ್ನು ಉಲ್ಲೇಖಿಸಿದ್ದಾನೆ. ನಂತರ ದೂರುದಾರೆ 112 ಪೊಲೀಸ್ ಹೆಲ್‌ಪ್‌ಲೈನ್‌ಗೆ ಕರೆ ಮಾಡಿದ್ದು, ನಂತರ ಪೊಲೀಸರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರೆಯ ಸುರಕ್ಷತೆಯ ಕಾರಣಕ್ಕಾಗಿ ರಾಜೇಶ್ ಬಳಸಿದ ರೆಡ್ಡಿ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಜೊತೆಗೆ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Mon, 5 January 26