ಚಳಿಗಾಲದಲ್ಲಿ ಶ್ವಾಸಕೋಶವನ್ನ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ
ಚಳಿಗಾಲದಲ್ಲಿ ಶೀತ, ಕೆಮ್ಮು, ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಶ್ವಾಸಕೋಶವನ್ನು ಬಲಪಡಿಸುವ ಆಹಾರಗಳನ್ನು ಸೇವಿಸುವುದು ಅಗತ್ಯ. ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸುವ ಆಹಾರಗಳ ಸೇವಿಸುವುದು ಅತ್ಯಗತ್ಯವಾಗಿದ್ದು, ಶ್ವಾಸಕೋಶವನ್ನು ಹೇಗೆ ಆರೋಗ್ಯವಾಗಿ ಕಾಪಾಡಿಕೊಳ್ಳಬೇಕೆನ್ನುವುದನ್ನು ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಡಾ. ಸಾಗರ್ ಸಿ ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

ನಾವು ಸಾಮಾನ್ಯವಾಗಿ ಆರೋಗ್ಯ (Health) ಎಂದಾಗ ತೂಕ, ಕೂದಲಿನ ಆರೈಕೆ, ಚರ್ಮದ ರಕ್ಷಣೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅದಕ್ಕಿಂತ ಮುಂದೆ ಹೋಗುವುದಿಲ್ಲ. ನಮಗಾಗಿ ದಣಿವಿಲ್ಲದೆ ದುಡಿಯುವ ಶ್ವಾಸಕೋಶದ (lungs) ಬಗ್ಗೆ ಯೋಚಿಸಲು ನಾವು ಒಂದು ನಿಮಿಷವನ್ನೂ ಮೀಸಲಿಡುವುದಿಲ್ಲ. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಚಳಿಗಾಲದ (Winter Session) ಆರಂಭದಲ್ಲಿ ನಮ್ಮ ಶ್ವಾಸಕೋಶಗಳು ಉಸಿರಾಟದ ತೊಂದರೆಗೆ ಸಿಲುಕುತ್ತವೆ. ಪಟಾಕಿಗಳ ಹೊಗೆ, ಕೃಷಿ ತ್ಯಾಜ್ಯ ಸುಡುವಿಕೆ, ಮದ್ಯಪಾನದ ಹೆಚ್ಚಳ, ತಾಪಮಾನದ ಏರುಪೇರು ಮತ್ತು ನಗರಗಳಲ್ಲಿ ಆಗುತ್ತಿರುವ ನಿರಂತರ ಮಾಲಿನ್ಯ (ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ 500 ದಾಟಿರುವುದು ಗಮನಿಸಬಹುದು)- ಇವೆಲ್ಲವೂ ಸೇರಿ ಶ್ವಾಸಕೋಶದ ಮೇಲೆ ಅತೀವ ಒತ್ತಡ ಹೇರುತ್ತವೆ.
ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಯಾವಾಗಲೂ ಲೇಸು
ಸಾಮಾನ್ಯವಾಗಿ ನಿಮ್ಮ 20ರ ಹರೆಯದ ಮಧ್ಯಭಾಗದಲ್ಲಿ ಶ್ವಾಸಕೋಶದ ಸಾಮರ್ಥ್ಯವು ಜಾಸ್ತಿ ಇರುತ್ತದೆ. ನಿಮ್ಮ ದೈನಂದಿನ ಅಭ್ಯಾಸಗಳನ್ನು ಅವಲಂಬಿಸಿ ಅದರ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಹಾನಗರಗಳಲ್ಲಿ ವಾಯು ಮಾಲಿನ್ಯವು ಸಾಮಾನ್ಯವಾಗಿದ್ದು, ಇದು ಈಗಾಗಲೇ ಅಸ್ತಮಾ ಮತ್ತು ಸಿಒಪಿಡಿಯಂಥ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಹೊರಗೆ ಹೋಗುವುದು ಅನಿವಾರ್ಯವಾದಾಗ ಎನ್95 ಅಥವಾ ಎನ್99 ಮಾಸ್ಕ್ ಧರಿಸುವುದು ಈಗ ಒಳ್ಳೆಯದು.
ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ಶಾಕ್: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ
ಈ ಸಮಸ್ಯೆಯನ್ನು ಸಶಕ್ತವಾಗಿ ಎದುರಿಸಲು ಕೆಲವು ದೈನಂದಿನ ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳಿ. ಕಾಯಿಲೆ ಬರುವವರೆಗೆ ಕಾಯಬೇಡಿ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಬ್ರಿಸ್ಕ್ ವಾಕಿಂಗ್ (ವೇಗದ ನಡಿಗೆ), ಸೈಕ್ಲಿಂಗ್ ಅಥವಾ ಈಜು ಮುಂತಾದ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮಗಳನ್ನು ಮಾಡಿ. ಇದು ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವುದಲ್ಲದೆ ಅದರ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ನೀವು ವ್ಯಾಯಾಮ ಮಾಡುವಾಗ ದೇಹಕ್ಕೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ, ಇದರಿಂದಾಗಿ ಶ್ವಾಸಕೋಶಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಲಿಯುತ್ತವೆ. ನಿಧಾನವಾಗಿ ಆರಂಭಿಸಿದರೂ ತೊಂದರೆ ಇಲ್ಲ, ಆದರೆ ನಿಯಮಿತವಾಗಿ ಮಾಡಿ. ಹೀಗೆ ಮಾಡಿದರೆ ನಿಮ್ಮ ಶ್ವಾಸಕೋಶ ನಿಮಗೆ ಕೃತಜ್ಞವಾಗಿರುತ್ತದೆ.
ನಿಮ್ಮ ನಗು ನಿಮ್ಮನ್ನು ಆರೋಗ್ಯವಾಗಿರಿಸಬಲ್ಲದು
ನಗು ಕೂಡ ಒಂದು ಸಣ್ಣ ವ್ಯಾಯಾಮವಿದ್ದಂತೆ. ಇದು ಶ್ವಾಸಕೋಶದಲ್ಲಿ ಉಳಿದುಹೋದ ಹಳೆಯ ಗಾಳಿಯನ್ನು ಹೊರಹಾಕಿ, ತಾಜಾ ಗಾಳಿಯು ಶ್ವಾಸಕೋಶದ ಅಂಗಾಂಶಗಳ ಆಳಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಉಸಿರಾಟದ ವ್ಯವಸ್ಥೆಗೆ ನೀವು ನೀಡಬಹುದಾದ ಅತ್ಯಂತ ಆನಂದದಾಯಕ ವ್ಯಾಯಾಮ ಎಂದರೆ ನಗು. ನಗು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಎಂಡಾರ್ಫಿನ್‌ಗಳ (ನೈಸರ್ಗಿಕ ನೋವು ನಿವಾರಕಗಳು) ಬಿಡುಗಡೆಗೆ ಬೆಂಬಲ ನೀಡುತ್ತದೆ. ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಒತ್ತಡ ಕಡಿಮೆಯಾದಾಗ ನರ ಮಂಡಲ ಶಾಂತಗೊಳ್ಳುತ್ತದೆ. ಅದರಿಂದ ಶ್ವಾಸನಾಳಗಳು ಸಡಿಲಗೊಳ್ಳುತ್ತವೆ. ಅಸ್ತಮಾ ಇರುವವರಿಗೆ ಒತ್ತಡ ಸಮಸ್ಯೆ ಜಾಸ್ತಿ ಮಾಡಬಹುದು, ನಗು ಅದಕ್ಕೆ ನೈಸರ್ಗಿಕ ಪ್ರತಿರೋಧವನ್ನು ಒಡ್ಡುತ್ತದೆ. ಆದ್ದರಿಂದ ನಿಮಗೆ ನಿಜವಾಗಿಯೂ ನಗು ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ನೀರು – ಶ್ವಾಸಕೋಶಕ್ಕೂ ಇದು ಅಮೃತ
ದೇಹದ ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲದೆ ಶ್ವಾಸಕೋಶಕ್ಕೂ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಜನರು ಸಾಮಾನ್ಯವಾಗಿ ಹೆಚ್ಚು ನೀರು ಕುಡಿಯಬೇಕೆಂದು ತಿಳಿದಿದ್ದರೂ, ಚಳಿಗಾಲದಲ್ಲಿ ಇದನ್ನು ನಿರ್ಲಕ್ಷಿಸುತ್ತಾರೆ. ಚಳಿಗಾಲದಲ್ಲಿ ನೀರು ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಶ್ವಾಸನಾಳದಲ್ಲಿನ ಲೋಳೆಯನ್ನು ದಪ್ಪವಾಗಿಸುತ್ತದೆ. ಸುಗಮ ಉಸಿರಾಟಕ್ಕೆ ಲೋಳೆಯು ತೆಳುವಾಗಿರುವುದು ಅಗತ್ಯ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ಲೋಳೆಯು ಜಿಗುಟು ಮತ್ತು ದಪ್ಪವಾಗುತ್ತದೆ. ಇದರಿಂದ ಶ್ವಾಸನಾಳದ ಸಿಲಿಯಾ ಎಂಬ ಅಂಗಾಶಗಳಿಗೆ ಆ ಲೋಳೆಯನ್ನು ಹೊರಹಾಕಲು ಕಷ್ಟವಾಗುತ್ತದೆ ಮತ್ತು ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿಯಾಗಿ ನ್ಯುಮೋನಿಯಾದಂತಹ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀರು ಕುಡಿಯುವುದನ್ನು ನಿರ್ಲಕ್ಷಿಸಬೇಡಿ.
ಶ್ವಾಸಕೋಶಕ್ಕೂ ಬೇಕು ಪೌಷ್ಟಿಕ ಆಹಾರ
ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ನೀವು ಉರಿಯೂತ ವಿರೋಧಿ ಆಹಾರಗಳ ಸೇವನೆ ಕಡೆಗೆ ಗಮನ ಹರಿಸಬೇಕು. ಬೆರ್ರಿ ಹಣ್ಣುಗಳು, ಅರಿಶಿನ, ಹಸಿರು ಎಲೆಗಳ ತರಕಾರಿ ಮತ್ತು ಒಮೆಗಾ-3 ಸಮೃದ್ಧವಾಗಿರುವ ಆಹಾರಗಳು (ಮೀನು, ಆಕ್ರೋಟ್) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಸ್ತಮಾ ಮತ್ತು ಸಿಓಪಿಡಿ ಹೆಚ್ಚಾಗುವುದನ್ನು ತಡೆಯುತ್ತದೆ. ಹರ್ಬಲ್ ಟೀ ಅಥವಾ ಉಗುರುಬೆಚ್ಚಗಿನ ನೀರಿನಂತಹ ದ್ರವ ಪದಾರ್ಥಗಳು ಕಫವನ್ನು ಕರಗಿಸಲು ಸಹಾಯ ಮಾಡುತ್ತವೆ. ಶುಷ್ಕ ಅಥವಾ ಮಾಲಿನ್ಯಭರಿತ ಹವಾಮಾನದಲ್ಲಿ ಕೆಫೀನ್ (ಕಾಫಿ/ಟೀ) ಮತ್ತು ಮದ್ಯಪಾನವನ್ನು ಮಿತಿಗೊಳಿಸುವುದು ಉತ್ತಮ.
ವೈದ್ಯರ ಜೊತೆ ಭೇಟಿಯಾಗಲು ಸರಿಯಾದ ಸಮಯ ಯಾವುದು?
ನಾವು ಸಾಮಾನ್ಯವಾಗಿ ಮನೆಮದ್ದುಗಳ ಮೊರೆ ಹೋಗುತ್ತೇವೆ. ಆದರೆ ಆರೋಗ್ಯವು ಹದಗೆಟ್ಟಾಗ ಮನೆ ಮದ್ದಿಗಿಂತ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ಎಂಟು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವ ಕೆಮ್ಮು, ದೈನಂದಿನ ಕೆಲಸಗಳ ಸಮಯದಲ್ಲಿ ಉಸಿರಾಟದ ತೊಂದರೆ, ಕೆಮ್ಮಿದಾಗ ರಕ್ತ ಅಥವಾ ಲೋಳೆ ಬರುವುದು, ಅಥವಾ ಪದೇ ಪದೇ ಬರುವ ನ್ಯುಮೋನಿಯಾದಂತಹ ಎದೆಯ ಸೋಂಕುಗಳು ಕಾಣಿಸಿಕೊಳ್ಳುವುದು ಅಪಾಯದ ಮುನ್ಸೂಚನೆಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ನೆನಪಿಡಿ, ನಿಮ್ಮ ಶ್ವಾಸಕೋಶಗಳು ಶಕ್ತಿಯುತವಾಗಿರುತ್ತವೆ ಎನ್ನುವುದೇನೋ ನಿಜ, ಆದರೆ ಅವು ಕೂಡ ದುರ್ಬಲಗೊಳ್ಳಬಹುದು. ಆದ್ದರಿಂದ ನಿಮ್ಮ ಉಸಿರಾಟದ ಗುಣಮಟ್ಟವು ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಹಾಗಾಗಿ ನಿರ್ಲಕ್ಷ್ಯ ಮಾಡದಿರಿ. ಶ್ವಾಸಕೋಶದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
