ಬೆಂಗಳೂರು ಸೆ.13: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಇಲಾಖೆಗೆ 269 ಕೋಟಿ ರೂ. ನಷ್ಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ (IAS) ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ (High Court) ತಡೆ ನೀಡಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಮಿತಾ ಪ್ರಸಾದ್, ಡಾ.ಇ.ವಿ.ರಮಣರೆಡ್ಡಿ ಅವರ ವಿರುದ್ಧ ಇಲಾಖೆಯ ಹಣವನ್ನು ದುರ್ವಿನಿಯೋಗ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆಗೆ ಸರ್ಕಾರದ ಪೂರ್ವಾನುಮತಿ ಇಲ್ಲದ ಹಿನ್ನೆಲೆಯಲ್ಲಿ ಹೈಕೋರ್ಟ್ ಕೇಸ್ ರದ್ದು ಮಾಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಈ ಮೂವರು ಐಎಎಸ್ ಅಧಿಕಾರಿಗಳು ಅಧಿಕಾರಿಗಳು, 2009-10ರಿಂದ 2014- 15ರ ನಡುವೆ ಆರ್‌ಡಿಪಿಆರ್ ಇಲಾಖೆಯ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ(FD) ಮಾಡದೇ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ ದುರ್ವಿನಿಯೋಗ ಮಾಡಿಕೊಂಡಿದ್ದಾರೆ ಎಂದು ಕೋಲಾರದ ಮಾಸ್ತಿ ಲೇಔಟ್‌ನ ಸಾಮಾಜಿಕ ಕಾರ್ಯಕರ್ತ ಎಸ್.ನಾರಾಯಣಸ್ವಾಮಿ ದೂರು ನೀಡಿದ್ದರು.
ಇವರ ಜೊತೆ ಬ್ಯಾಂಕ್ ಮ್ಯಾನೇಜರ್ ಕೂಡಾ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ 98 ಖಾತೆಗಳನ್ನು ತೆರೆದಿದ್ದಾರೆ. ಈ ಮೂಲಕ 269 ಕೋಟಿ ರೂ. ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದ ತನಿಖೆಗೆ ಎಸಿಬಿಗೆ ನಿರ್ದೇಶನ ನೀಡಿದ್ದರು.
ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ನಿವೃತ್ತ ಐಎಎಸ್ ಅಧಿಕಾರಿ ಅಮಿತಾ ಪ್ರಸಾದ್, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ಹಾಲಿ ಐಎಎಸ್ ಅಧಿಕಾರಿ ಡಾ.ಇ.ವಿ.ರಮಣರೆಡ್ಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ