ಎಂಎಲ್ಎ ಟಿಕೆಟ್ ವಂಚನೆ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ
ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಕೇಸ್ಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು, ಸೆಪ್ಟೆಂಬರ್ 13: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಕೇಸ್ಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ (Chaitra Kundapura), ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಿಗೆ ಸಿಸಿಬಿ ಮನವಿ ಮಾಡಿದ್ದರು.
ಜಡ್ಜ್ ಎದುರು ಚೈತ್ರಾ ಕುಂದಾಪುರ ಕಣ್ಣೀರು
ಕೋರ್ಟ್ನಲ್ಲಿ ಜಡ್ಜ್ ಎದುರು ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದು, ಬಂಧನ ಪ್ರಕ್ರಿಯೆ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಮೊದಲು ಬಂಧಿಸಿದ ಉಡುಪಿ ಪೊಲೀಸರು, ಸ್ವಲ್ಪ ಕಿರಿಕಿರಿ ಮಾಡಿದರೆ. ಸಿಸಿಬಿ ಪೊಲೀಸರು ಕೈ ಎಳೆದಾಡಿ ನೋವು ಮಾಡಿದ್ದಾರೆ. ನನ್ನ ತಾಯಿ ಜತೆ ಮಾತನಾಡಲು ಸಹ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮೇಲೆ ಯಾವ ಕೇಸ್ ಇದೆ ಎಂದು ನನಗೆ ಗೊತ್ತಿಲ್ಲ ಎಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ನಲ್ಲಿ ಚೈತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ನಾನು ಆಶ್ರಯ ನೀಡಿರಲಿಲ್ಲ: ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟನೆ
ಬಂಧನ ಕುರಿತು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆಯೇ ಎಂದು ತನಿಖಾಧಿಕಾರಿ ರೀನಾ ಸುವರ್ಣಾಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದು, ಈ ವೇಳೆ ಕುಟುಂಬದವರಿಗೆ ಮಾಹಿತಿ ಇಲ್ಲವೆಂದು ಚೈತ್ರಾ ಹೇಳಿದ್ದಾರೆ. ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ನನ್ನ ವಿರುದ್ಧದ ದಾಖಲಿಸಿರುವ ದೂರಿನ ಸೆಕ್ಷನ್ ಮಾತ್ರ ಹೇಳಿದ್ದಾರೆ. ಯಾವ ದೂರು, ಯಾರು ದೂರು ನೀಡಿದರು ಎಂದು ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಆರೋಪಿಗಳ ಜತೆ ವಕೀಲರು ಅರ್ಧ ಗಂಟೆ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದು, ಕೋರ್ಟ್ ಆವರಣದಲ್ಲೇ ಆರೋಪಿಗಳಿಗೆ ವಕೀಲರೊಂದಿಗೆ ಮಾತನಾಡಲು ನ್ಯಾಯಾಲಯ ಅವಕಾಶ ನೀಡಿದೆ.
ಇದನ್ನೂ ಓದಿ; ಚೈತ್ರಾ ಕುಂದಾಪುರ ವಂಚನೆ: 10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲ್ಯಾನ್! ಸಲೂನ್ ಮಾಲೀಕನಿಂದ ಸ್ಪೋಟಕ ಮಾಹಿತಿ
ಆರೋಪಿಗಳಿಗೆ ಯಾವುದೇ ನೋಟಿಸ್ ನೀಡದೆ ಬಂಧಿಸಿದ್ದಾರೆ ಎಂದು ವಿಚಾರಣೆ ವೇಳೆ ಕೋರ್ಟ್‌ಗೆ ಆರೋಪಿಗಳ ಪರ ವಕೀಲರು ಹೇಳಿದ್ದಾರೆ. ಸಿಆರ್‌ಪಿಸಿ 41ರಡಿ ನೋಟಿಸ್ ನೀಡಬೇಕಿತ್ತು. ಸಿಸಿಬಿ ಪೊಲೀಸರು ನಿಯಮ ಉಲ್ಲಂಘಿಸಿದ್ದಾರೆ ಎಂದಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ನೋಟಿಸ್ ನೀಡಿಲ್ಲ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಹೇಳಿದ್ದಾರೆ.
ಮೂರನೇ ಆರೋಪಿ ನಾಪತ್ತೆ
ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ, ಎಫ್ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿದ್ದಾರೆ. ನಿನ್ನೆ ಸಂಜೆವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪ್ರಕರಣ ಬಳಿಕ ಮೈಸೂರಿನತ್ತ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಹಿರೇಹಡಗಲಿಯಲ್ಲಿರುವ ಹಾಲಸ್ವಾಮಿ ಮಠ ಖಾಲಿ ಖಾಲಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Wed, 13 September 23