ವಿದೇಶ ಪ್ರವಾಸ ಖರ್ಚನ್ನು ಶಾಸಕರ ಭತ್ಯೆಯಿಂದ ಕಡಿತಗೊಳಿಸಲು ಆದೇಶ, ಇದನ್ನು ಪ್ರಶ್ನಿಸಿದ ಹೈಕೋರ್ಟ್ ಮೊರೆ ಹೊಗಿದ್ದ ಮಾಜಿ ಶಾಸಕರಿಗೆ ಹಿನ್ನೆಡೆ
ಸರ್ಕಾರಿ ಪ್ರಾಯೋಜಿತ ಕಾನೂನು ಅಧ್ಯಯನಕ್ಕೆಂದು ನಿಗದಿಯಾಗಿದ್ದ ವಿದೇಶ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದರಿಂದ ಅದರ ಖರ್ಚನ್ನು ಮಾಜಿ ಶಾಸಕರೊಬ್ಬರ ತೆಲೆಗೆ ಬಂದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಮಾಜಿ ಶಾಸಕ ಚಿಕ್ಕಣ್ಣಗೆ ಹಿನ್ನೆಡೆಯಾಗಿದೆ. ಏನಿದು ಪ್ರಕರಣ ಎನ್ನುವವ ವಿವರ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಸೆಪ್ಟೆಂಬರ್ 07); ಸರ್ಕಾರಿ ಪ್ರಾಯೋಜಿತ ಕಾನೂನು ಅಧ್ಯಯನಕ್ಕೆ ತೆರಳದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣರಿಂದ(Ex-MLA Chikkanna) ವೆಚ್ಚ ಮರಳಿ ಪಡೆಯಲು ಸ್ಪೀಕರ್ ನೀಡಿದ್ದ ಆದೇಶವನ್ನು ರದ್ದುಪಡಿಸಲು ಹೈಕೋರ್ಟ್ (Karnataka high court) ನಿರಾಕರಿಸಿದೆ. 2009ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್, ಬ್ಯಾಂಕಾಕ್ ನ ಕಾನೂನು ಅಧ್ಯಯನ ಪ್ರವಾಸ ಮಾಡಲು ಆಗ ಶಾಸಕರಾಗಿದ್ದ ಚಿಕ್ಕಣ್ಣ ನವರನ್ನು ಆಯ್ಕೆ ಮಾಡಲಾಗಿತ್ತು. ಪ್ರವಾಸಕ್ಕೆ ತೆರಳಲು 4 ಲಕ್ಷ ವೆಚ್ಚ ಮಾಡಿದ್ದ ಸರ್ಕಾರ, ಟಿಕೆಟ್ ವೆಚ್ಚವನ್ನು ಖಾಸಗಿ ಕಂಪನಿಗೆ ಪಾವತಿ ಮಾಡಿತ್ತು. ಆದ್ರೆ, ಅನಾರೋಗ್ಯ ಕಾರಣದಿಂದಾಗಿ ಪ್ರವಾಸಕ್ಕೆ ತೆರಳದ ಚಿಕ್ಕಣ್ಣ, ಪ್ರವಾಸ ಆಯೋಜಿಸಿದ್ದ ಕಂಪನಿಯಿಂದ ಹಣ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ ಸಂಪೂರ್ಣ ವೆಚ್ಚ ನೀಡಲು ಸಾಧ್ಯವಿಲ್ಲವೆಂದು ಪ್ರತಿಕ್ರಿಯಿಸಿದ್ದ ಕಂಪನಿ ಸರ್ಕಾರಕ್ಕೆ ಶೇ. 20 ರಷ್ಟು ಮಾತ್ರ ಹಣ ಮರಳಿ ನೀಡಿತ್ತು. ಪ್ರವಾಸಕ್ಕೆ ತೆರಳದಿದ್ದರಿಂದ ಆ ನಷ್ಟವನ್ನು ಶಾಸಕ ಚಿಕ್ಕಣ್ಣರಿಂದ ಪಡೆಯಲು ಸ್ಪೀಕರ್ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಚಿಕ್ಕಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ.
ಪ್ರವಾಸಕ್ಕೆ ನಿಗದಿಯಾದ ದಿನಾಂಕ ಹತ್ತಿರವಿದ್ದಾಗ ಪ್ರವಾಸ ರದ್ದುಪಡಿಸಿದರೆ ಪ್ರವಾಸ ಆಯೋಜಿಸಿದ ಕಂಪನಿ ಅದನ್ನು ಮರಳಿ ನೀಡಲು ಸಾಧ್ಯವಿಲ್ಲ. ಏಕೆಂದರೆ ಟಿಕೆಟ್, ವಾಸ್ತವ್ಯ ಮತ್ತಿತರ ಕಾರಣಗಳಿಗೆ ಹಣ ವೆಚ್ಚವಾಗಿರುತ್ತದೆ. ಹೀಗಾಗಿ ಖರ್ಚನ್ನು ಶಾಸಕರ ಭತ್ಯೆಯಿಂದ ಕಡಿತಗೊಳಿಸಲು ಸ್ಪೀಕರ್ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ. ವೆಚ್ಚ ಮರುಪಾವತಿ ವಿಚಾರದಲ್ಲಿ ಯಾವುದೇ ವಿವಾದವಿಲ್ಲದಿರುವುದರಿಂದ ಸ್ಪೀಕರ್ ಆದೇಶ ನೀಡುವ ಮುನ್ನ ಶಾಸಕರ ವಾದ ಕೇಳುವ ಅಗತ್ಯವಿಲ್ಲವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಚಿಕ್ಕಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಚಿಕ್ಕಣ್ಣ ಅವರಿಗೆ ಹಿನ್ನೆಡೆಯಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ