ಘೋಷಣೆಯಾಗಿರುವ ಪರೀಕ್ಷೆಗಳಿಗೆ ರಜೆಯ ರಿಯಾಯ್ತಿ ಇಲ್ಲ: ಸರ್ಕಾರದ ಸ್ಪಷ್ಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 08, 2022 | 9:02 PM

ರಜೆ ಘೋಷಿಸಿದ ದಿನಗಳಂದು ಪರೀಕ್ಷೆ ನಿಗದಿಯಾಗಿದ್ದರೆ, ಪರೀಕ್ಷೆಗಳು ಯಥಾಪ್ರಕಾರ ನಿಗದಿತ ದಿನಗಳಲ್ಲಿ ನಡೆಯಲಿವೆ ಎಂದು ಸರ್ಕಾರದ ಆದೇಶ ಸ್ಪಷ್ಟಪಡಿಸಿದೆ.

ಘೋಷಣೆಯಾಗಿರುವ ಪರೀಕ್ಷೆಗಳಿಗೆ ರಜೆಯ ರಿಯಾಯ್ತಿ ಇಲ್ಲ: ಸರ್ಕಾರದ ಸ್ಪಷ್ಟನೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ, ಡಿಪ್ಲೊಮಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಆದರೆ ಈ ಆದೇಶವು ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. ರಜೆಯ ದಿನಗಳಂದು ಪರೀಕ್ಷೆ ನಿಗದಿಯಾಗಿದ್ದರೆ, ಪರೀಕ್ಷೆಗಳು ಯಥಾಪ್ರಕಾರ ನಿಗದಿತ ದಿನಗಳಲ್ಲಿ ನಡೆಯಲಿವೆ ಎಂದು ಸರ್ಕಾರದ ಆದೇಶ ಸ್ಪಷ್ಟಪಡಿಸಿದೆ.

ಉದ್ವೇಗ ಸಲ್ಲದು: ಸಿಎಂ ಬೊಮ್ಮಾಯಿ

ಸಮವಸ್ತ್ರ ವಿಚಾರದಲ್ಲಿ ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಹೈಕೋರ್ಟ್ ತೀರ್ಪು ಆಧರಿಸಿ ರಾಜ್ಯ ಸರ್ಕಾರವು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಎಲ್ಲರು ಶಾಂತ ರೀತಿಯಿಂದ ಸಹಕರಿಸಬೇಕು ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನರಲ್ಲಿ ನಾನು ಈಗಾಗಲೇ ಮನವಿ ಮಾಡಿದ್ದೇನೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಾಗರ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂಸಾಚಾರ

ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮುಸ್ಲಿಂ ಸಂಘಟನೆಗಳ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಕೆಲವರು ಭಗವಾಧ್ವಜ ಪ್ರದರ್ಶಿಸಿದಾಗ, ಪರಸ್ಪರ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಈ ವೇಳೆ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆದ ದೃಶ್ಯಗಳನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿವಾದ: ಗದಗ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ

ಇದನ್ನೂ ಓದಿ: ಹಿಜಾಬ್ ವಿವಾದಕ್ಕೆ ರಾಜಕಾರಣವೇ ಮುಖ್ಯ ಕಾರಣ ಎಂದ ಕಾಂಗ್ರೆಸ್​ನ ಸಲೀಂ ಅಹ್ಮದ್, ಬಿಜೆಪಿ ಮಾಧುಸ್ವಾಮಿ