ಕರ್ನಾಟಕದ ಬಹುತೇಕ ಭಾಗಕ್ಕೆ ಹಬ್ಬಿದ ಹಿಜಾಬ್- ಕೇಸರಿ ಶಾಲು ವಿವಾದ; ರಾಜಕೀಯ ನಾಯಕರ ಪ್ರತಿಕ್ರಿಯೆ ಏನು? ಇಲ್ಲಿದೆ ವಿವರ

| Updated By: ganapathi bhat

Updated on: Feb 07, 2022 | 4:21 PM

Hijab Controversy: ಹಿಜಾಬ್ ವಿವಾದ ಹೈಕೋರ್ಟ್ ಅಂಗಳದಲ್ಲಿದೆ. ಈ ಮಧ್ಯೆ ಉಡುಪಿಯಲ್ಲಿ ಆರಂಭವಾದ ವಿವಾದ ಶಿವಮೊಗ್ಗ, ಚಿಕ್ಕಮಗಳೂರು, ಬೀದರ್, ತುಮಕೂರು, ಮೈಸೂರು, ದಾವಣಗೆರೆ, ಬೀದರ್, ಗದಗ. ವಿಜಯಪುರ, ಬಾಗಲಕೋಟೆ ಹೀಗೆ ಮಲೆನಾಡು, ಉತ್ತರ ಕರ್ನಾಟಕ ಭಾಗವನ್ನು ಕೂಡ ಆವರಿಸಿದೆ.

ಕರ್ನಾಟಕದ ಬಹುತೇಕ ಭಾಗಕ್ಕೆ ಹಬ್ಬಿದ ಹಿಜಾಬ್- ಕೇಸರಿ ಶಾಲು ವಿವಾದ; ರಾಜಕೀಯ ನಾಯಕರ ಪ್ರತಿಕ್ರಿಯೆ ಏನು? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಉಡುಪಿಯಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ಹಿಂದೂ ಸಮುದಾಯದ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ. ಸರ್ಕಾರ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿ ಆದೇಶ ನೀಡಿದೆ. ಅಲ್ಲದೆ, ಹಿಜಾಬ್ ವಿವಾದ ಹೈಕೋರ್ಟ್ ಅಂಗಳದಲ್ಲಿದೆ. ಈ ಮಧ್ಯೆ ಉಡುಪಿಯಲ್ಲಿ ಆರಂಭವಾದ ವಿವಾದ ಶಿವಮೊಗ್ಗ, ಚಿಕ್ಕಮಗಳೂರು, ಬೀದರ್, ತುಮಕೂರು, ಮೈಸೂರು, ದಾವಣಗೆರೆ, ಬೀದರ್, ಗದಗ. ವಿಜಯಪುರ, ಬಾಗಲಕೋಟೆ ಹೀಗೆ ಮಲೆನಾಡು, ಉತ್ತರ ಕರ್ನಾಟಕ ಭಾಗವನ್ನು ಕೂಡ ಆವರಿಸಿದೆ.

ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಕ್ಕೆ ಪೊಲೀಸರ ತಡೆ ಒಡ್ಡಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು, ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ತರಗತಿಗೆ ಪ್ರವೇಶ ಮಾಡಿದ್ದಾರೆ. ಕೇಸರಿ ಶಾಲು ಹಾಕಿ ಬಂದಿದ್ದಕ್ಕೆ ಪ್ರಾಂಶುಪಾಲರ ಆಕ್ಷೇಪ ಕೇಳಿಬಂದಿದೆ. ಕಾಲೇಜಿಗೆ ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳಿಗೆ ವಾರ್ನಿಂಗ್ ಮಾಡಿಸಲಾಗಿದೆ.

ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಉಡುಪಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಬುರ್ಖಾ ಧರಿಸಿ ಬಂದಿದ್ದ 22 ವಿದ್ಯಾರ್ಥಿನಿಯರಿಗೆ ವ್ಯವಸ್ಥೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಘಟನೆ ನಡೆದಿದೆ.

ಕೇಸರಿ ಶಾಲು ಧರಿಸಿ ಕಾಲೇಜಿನೊಳಗೆ ತೆರಳಿದ್ದಕ್ಕೆ ವಿರೋಧ ವ್ಯಕ್ತವಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಸರ್ಕಾರಿ ಪದವಿ ಕಾಲೇಜು ಬಳಿ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ. ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಲು ಅವಕಾಶಕ್ಕೆ ಆಗ್ರಹ ಕೇಳಿಬಂದಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಲು ಆಗ್ರಹ ಚಿಕ್ಕಮಗಳೂರು ನಗರದಲ್ಲಿ ಕೂಡ ಕೇಳಿಬಂದಿದೆ. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಗಿದೆ.

ಹಿಜಾಬ್, ಕೇಸರಿ ಶಾಲು ವಿವಾದ ಗದಗ ಜಿಲ್ಲೆಗೂ ವ್ಯಾಪಿಸಿದೆ. ಕಾಲೇಜಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಪ್ರವೇಶ ಮಾಡಿದ್ದಾರೆ. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದೆ. ಗದಗದ ಹಳೆ ಕೋರ್ಟ್ ಆವರಣದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಗೂ ಹಿಜಾಬ್ ಗದ್ದಲ ಹರಡಿಕೊಂಡಿದೆ. ಜಿಲ್ಲೆಯ ಹೊನ್ನಾಳಿ ಸರ್ಕಾರಿ ಪದವಿ ಕಾಲೇಜ್ ನಲ್ಲಿ ಹಿಜಾಬ್ ಧರಿಸುವುದನ್ನ ಖಂಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲ್ ಹಾಕಿಕೊಡು ಬಂದಿದ್ದಾರೆ. ಕಾಲೇಜಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಎರಡು ಗುಂಪುಗಳ ಜೊತೆ ಮಾತುಕತೆ ನಡೆಸಿ ಕಾಲೇಜುಗಳಲ್ಲಿ ಸಂಘರ್ಷ ಸರಿಯಲ್ಲ ಎಂದು ಹೇಳಿದ್ದಾರೆ.

ಕೆಲವು ಸಂಘಟನೆಗಳು ವಿದ್ಯಾರ್ಥಿನಿಯರನ್ನು ಪ್ರೇರೇಪಿಸುತ್ತಿವೆ: ಹೆಚ್​ಡಿ ಕುಮಾರಸ್ವಾಮಿ
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಕೆಲವು ಸಂಘಟನೆಗಳು ವಿದ್ಯಾರ್ಥಿನಿಯರನ್ನು ಪ್ರೇರೇಪಿಸುತ್ತಿವೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಸಮಾಜದಲ್ಲಿರುವ ಇತರ ಸಮಸ್ಯೆಗಳ ಬಗ್ಗೆ ಗಮನಹರಿಸಿ. ಮತಕ್ಕಾಗಿ ಸಮುದಾಯವನ್ನು ಬೆಂಬಲಿಸುವುದು ಸರಿಯಲ್ಲ. ವಿದ್ಯಾರ್ಥಿಗಳಲ್ಲಿ ದ್ವೇಷ ರಾಜಕಾರಣದ ಬೆಂಕಿ ಹಚ್ಚಬೇಡಿ. ನಮ್ಮ ಧಾರ್ಮಿಕ ಸಂಸ್ಕೃತಿ ಯಾರೂ ಅಲುಗಾಡಿಸಲಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್‌ನವರು ಮುಸ್ಲಿಮರಿಗೆ ನೀಡಿದ್ದ ಸೌಲಭ್ಯ ದುರುಪಯೋಗ ಮಾಡಿಕೊಂಡಿದ್ದಾರೆ: ಯತ್ನಾಳ್
ಕಾಂಗ್ರೆಸ್‌ನವರು ಮುಸ್ಲಿಮರಿಗೆ ನೀಡಿದ್ದ ಸೌಲಭ್ಯ ದುರುಪಯೋಗ ಮಾಡಿಕೊಂಡಿದ್ದಾರೆ. ಇನ್ನು ಅದೆಲ್ಲ ನಡೆಯಲ್ಲ, ದೇಶದಲ್ಲಿ ಮೋದಿ ಸರ್ಕಾರವಿದೆ. ಯುವ ಜನಾಂಗ ಜಾಗೃತಗೊಂಡು ದೇಶ ಭಕ್ತರಾಗಿದ್ದಾರೆ. ಹಿಂದಿನ ಕಾಲ ಬೇರೆ, ಇಂದಿನ ಕಾಲ ಬೇರೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಹೈಕೋರ್ಟ್ ಏನು ತೀರ್ಪು ನೀಡುತ್ತೋ ಕಾದುನೋಡೋಣ: ಸಿದ್ದರಾಮಯ್ಯ
ಕಾಲೇಜುಗಳಲ್ಲಿ ಹಿಜಾಬ್ ವಿಚಾರ ಹೈಕೋರ್ಟ್​ನಲ್ಲಿದ್ದೆ, ನಾಳೆ ತೀರ್ಪು ಬರುತ್ತೆ. ಹೈಕೋರ್ಟ್ ಏನು ತೀರ್ಪು ನೀಡುತ್ತೋ ಕಾದುನೋಡೋಣ. ಹೆಣ್ಣುಮಕ್ಕಳು ಬಹಳ ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಹಿಜಾಬ್ ಮುಸ್ಲಿಂ ಸಮುದಾಯದ ಭಾಗವಿದೆ. ಇವರು ಕೇಸರಿ ಶಾಲು ಹಾಕಿ ಕಳುಹಿಸುವುದು ರಾಜಕೀಯ. ಹಿಜಾಬ್​ ಹಾಕುವುದರಿಂದ ಏನ್ ತೊಂದರೆ ಅಂತ ಹೇಳಲಿ. ಹಿಜಾಬ್, ಕೇಸರಿ ಶಾಲು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತೆ. ವೋಟ್​ಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸರ್ಕಾರ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಹಿಜಾಬ್ ವಿವಾದ ತಂದಿದೆ: ಎಂಬಿ ಪಾಟೀಲ್
ಸರ್ಕಾರ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಹಿಜಾಬ್ ವಿವಾದ ತಂದಿದೆ. ಸರ್ಕಾರ ಸಮವಸ್ತ್ರ ನೀತಿಯನ್ನ ಜಾರಿಗೆ ತರಬಾರದಿತ್ತು. ವಿವಾದಕ್ಕೂ ಮೊದಲು ಇದ್ದ ನೀತಿಯನ್ನ ಮುಂದುವರಿಸಿ. ಪಕ್ಷಗಳು ಹಿಜಾಬ್ ವಿವಾದದಲ್ಲಿ ರಾಜಕೀಯ ಮಾಡಬಾರದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈಗ ವಸ್ತ್ರಸಂಹಿತೆಯನ್ನು ಜಾರಿ ಮಾಡಬಾರದಿತ್ತು: ಯುಟಿ ಖಾದರ್
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಪ್ರಕರಣವನ್ನು ಆರಂಭದಲ್ಲಿ ಬಗೆಹರಿಸಬೇಕಾಗಿತ್ತು. ಯಾರೋ ನಾಲ್ಕು ಜನರಿಗೆ ಹೆದರಿ ಸಮಸ್ಯೆ ಬಗೆಹರಿಸಿಲ್ಲ. ಈ ವಿಚಾರ ಕೋರ್ಟ್‌ನಲ್ಲಿದೆ, ಅಲ್ಲೇ ತೀರ್ಮಾನವಾಗಬೇಕು. ಈಗ ವಸ್ತ್ರಸಂಹಿತೆಯನ್ನು ಜಾರಿ ಮಾಡಬಾರದಿತ್ತು ಎಂದು ಚಿಕ್ಕಬಳ್ಳಾಪುರ ತಾಲೂಕಿನ ಮೋಟ್ಲೂರಿನಲ್ಲಿ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ.

ವಿವಾದ ಸೃಷ್ಟಿಯಾದ ಹಿನ್ನೆಲೆ ರಾಜ್ಯದ ಎಲ್ಲ ಶಾಲೆಗಳಿಗೆ ಪೊಲೀಸರು ರಕ್ಷಣೆ ನೀಡುತ್ತಾರೆ: ಆರಗ ಜ್ಞಾನೇಂದ್ರ
ಹಿಜಾಬ್, ಕೇಸರಿ ಶಾಲು ವಿವಾದ ಸೃಷ್ಟಿಯಾದ ಹಿನ್ನೆಲೆ ರಾಜ್ಯದ ಎಲ್ಲ ಶಾಲೆಗಳಿಗೆ ಪೊಲೀಸರು ರಕ್ಷಣೆ ನೀಡುತ್ತಾರೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಹಾಜರಾಗಬೇಕು. ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವಂತಿಲ್ಲ. ಸಮವಸ್ತ್ರ ಸಮಾನತೆಯ ಸಂಕೇತವಾಗಿದೆ. ಕಾಣದ ಶಕ್ತಿಯೊಂದು ಕೆಲಸ ಮಾಡುತ್ತಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಕೊವಿಡ್‌ನಿಂದ ಕಳೆದ 2 ವರ್ಷದ ಶಿಕ್ಷಣ ಹಾಳಾಗಿದೆ. ಈ ವರ್ಷ ಕೂಡ ಮಕ್ಕಳ ಭವಿಷ್ಯ ಹಾಳಾಗಬಾರದು. ಹೀಗಾಗಿ ಯಾರೂ ಕೂಡ ಮಕ್ಕಳನ್ನು ಎತ್ತಿಕಟ್ಟಬಾರದು. ಯಾವುದೇ ಪ್ರಚೋದನೆಗೆ ವಿದ್ಯಾರ್ಥಿಗಳು ಒಳಗಾಗಬಾರದು ಎಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಾಲೆ- ಕಾಲೇಜುಗಳಲ್ಲಿ ಹೆಚ್ಚಾಗ್ತಿದೆ ಹಿಜಾಬ್, ಕೇಸರಿ ಶಾಲು ಸಮರ; ನೀಲಿ ಶಾಲ್ ಧರಿಸಿ ಬಂದ ಮತ್ತೊಂದು ಬಣ, ಪ್ರಾಂಶುಪಾಲರು ಹೈರಾಣ

ಇದನ್ನೂ ಓದಿ: ಹಿಜಾಬ್ ವಿವಾದ ಹಿನ್ನೆಲೆ ಬಿಬಿಎಂಪಿ ಶಾಲೆಗಳು ಅಲರ್ಟ್; ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ ವಿತರಿಸಲು ಮುಂದಾದ ಪಾಲಿಕೆ

Published On - 4:20 pm, Mon, 7 February 22