
ಬೆಂಗಳೂರು, ನವೆಂಬರ್ 14: ಐತಿಹಾಸಿಕ ಕಡಲೆಕಾಯಿ ಪರಿಷೆ (Kadalekai Parishe) ಬೆಂಗಳೂರಿನ (Bengaluru) ಒಂದು ದೊಡ್ಡ ಜಾತ್ರೆ. ಪರಿಷೆ ನೋಡುವುದಕ್ಕೆ ನಗರದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ನವೆಂಬರ್ 17ರಿಂದ 21ರವರೆಗೆ ಬೆಂಗಳೂರಿನ ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆ ಶುರುವಾಗಲಿದೆ. ಹೀಗಾಗಿ ಪರಿಷೆಗೆ ಸಿದ್ಧತೆ ಭರದಿಂದ ಶುರುವಾಗಿದೆ. ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯದ ಆವರಣದಲ್ಲಿ ಈ ವರ್ಷ ವಿಜೃಂಭಣೆಯಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ಬೆಳಗ್ಗೆ 10ಕ್ಕೆ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತಿದ್ದು, ಪರಿಷೆಗೆ 5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.
ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಕಡಲೆಕಾಯಿ ಪರಿಷೆ ಐತಿಹಾಸಿಕ ಹಿನ್ನಲೆ ಹೊಂದಿದೆ. ಪರಿಷೆಗೆ ಲಕ್ಷಾಂತರ ಜನ ಸೇರುತ್ತಾರೆ.
ಕಡಲೆಕಾಯಿ ಪರಿಷೆಯನ್ನು ಐದು ದಿನಗಳಿಗೆ ಸೀಮಿತ ಮಾಡಬೇಕು ಎಂದು ಬಸವನಗುಡಿ ನಿವಾಸಿಗಳು ಮುಜರಾಯಿ ಇಲಾಖೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂನಿಂದ ಪತ್ರ ಬರೆಯಲಾಗಿದೆ.
ಕಡಲೆಕಾಯಿ ಮಾರಾಟ ಮಾಡಲು ಬೇರೆ ಊರು, ಜಿಲ್ಲೆಗಳಿಂದ ವ್ಯಾಪಾರಿಗಳು ಬಂದು ಬಸವನಗುಡಿಯಲ್ಲಿ ಬಿಡಾರ ಹೂಡುತ್ತಾರೆ. ಈ ವ್ಯಾಪಾರಿಗಳಿಗೆ ಯಾವ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಲಾಗುವುದಿಲ್ಲ. ಅವರ ಶೌಚಕ್ಕೆ ಶೌಚಾಲಯ ಕೂಡ ಇರುವುದಿಲ್ಲ. ಹೀಗಾಗಿ ಅವರೆಲ್ಲಾ ಮನೆ ಮುಂದೆ, ರಸ್ತೆ ಗಲ್ಲಿಗಳಲ್ಲಿ ಬಹಿರ್ದೆಸೆ ಮುಗಿಸಿಕೊಳ್ಳುತ್ತಾರೆ. ರಾಶಿ ರಾಶಿ ಕಸ, ಗಲೀಜಿನಿಂದ ಸಮಸ್ಯೆಯಾಗುತ್ತದೆ. ಹೀಗಾಗಿ ಪರಿಷೆಗೆ ಸಕಲ ವ್ಯವಸ್ಥೆ ಮಾಡಿಕೊಡಿ ಎಂದು ನಿವಾಸಿಗಳು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇದೇ ತಿಂಗಳಲ್ಲಿ ಎರಡೆರಡು ಕಡಲೆಕಾಯಿ ಪರಿಷೆ: ಎಲ್ಲೆಲ್ಲಿ? ಯಾವಾಗ? ಏನು ವಿಶೇಷ?
ಬಸವನಗುಡಿ ಕಡಲೆಕಾಯಿ ಪರಿಷೆ ಈ ಹಿಂದೆ ಮೂರು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈ ವರ್ಷ 5 ದಿನಗಳಿಗೆ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ, ಪರಿಷೆಗೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಭರ್ಜರಿಯಾಗಿ ಕಡಲೆಕಾಯಿ ಪರಿಷೆ ಸಂಭ್ರಮಿಸಲು ನಗರವಾಸಿಗಳು ಕಾತರದಿಂದಿದ್ದಾರೆ.