ಟ್ರಾಫಿಕ್ಗೆ ಕಡಿವಾಣ ಹಾಕಲು ಐಟಿ ಕಂಪನಿಗಳ ಪ್ಲಾನ್: ಮೆಟ್ರೋದಲ್ಲಿ ಕಚೇರಿಗೆ ಬರೋ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಟೆಕ್ಕಿಗಳಿಗಾಗಿ ಸಂಸ್ಥೆಯೊಂದು ಉಚಿತ ಮೆಟ್ರೋ ಪಾಸ್ ನೀಡಲು ಮುಂದಾಗಿವೆ. ಇದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರಕಲಿದ್ದು, ಈ ಮೂಲಕ ಸುಮಾರು 2.5 ಲಕ್ಷ ಟೆಕ್ಕಿಗಳು ಕೇವಲ 30-40 ನಿಮಿಷಗಳಲ್ಲಿ ಕಚೇರಿ ತಲುಪಬಹುದು. ಟ್ರಾಫಿಕ್ನಲ್ಲಿ ಸಿಲುಕುವ ನೌಕರರ ಸಮಯವನ್ನು ಉಳಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಿದೆ.

ಬೆಂಗಳೂರು, ನವೆಂಬರ್ 14: ನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕು ಎಂದರೆ ಸುಮಾರು ಎರಡರಿಂದ ಮೂರು ಗಂಟೆ ಬೇಕು. ಆದರೆ ಮೆಟ್ರೋದಲ್ಲಿ (Namma Metro) ಹೋದರೆ 30 ರಿಂದ 40 ನಿಮಿಷ ಸಾಕು. ಹೀಗಾಗಿ ಟ್ರಾಫಿಕ್ಗೆ ಕಡಿವಾಣ ಹಾಕಲು ಸಂಸ್ಥೆಯೊಂದು ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡಲು ಮುಂದಾಗಿದೆ.
ಟ್ರಾಫಿಕ್ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಪರಿಹಾರ
ಆರ್.ವಿ ರೋಡ್ ಇಂದ ಬೊಮ್ಮಸಂದ್ರ ಮಾರ್ಗದಲ್ಲಿರುವ (ಯೆಲ್ಲೋ ಲೈನ್) ಐಟಿಬಿಟಿ ಕಂಪನಿಗಳಿಗೆ ಕೆಲಸಕ್ಕೆ ಬರುವ ಟೆಕ್ಕಿಗಳಿಗೆ ಸಂಚಾರ ಮಾಡಲು ಸಂಸ್ಥೆಯೊಂದು ಮೆಟ್ರೋ ಪಾಸ್ ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ ಈಗಾಗಲೆ ಕೆಲ ಕಂಪನಿಗಳ 250 ಉದ್ಯೋಗಿಗಳಿಗೆ ಸಿಎಸ್ಆರ್ ಫಂಡ್ನಿಂದ (Corporate Social Responsibility)ಆರ್ಬಿಟ್ ವಾಲೆಟ್ ರೂಪೇ ಕಾರ್ಡ್ ಮೂಲಕ 1500 ರುಪಾಯಿಯ ಪಾಸ್ ನೀಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಟೆಕ್ಕಿಗಳು ಕೆಲಸಕ್ಕಾಗಿ ಸಂಚಾರ ಮಾಡುತ್ತಿದ್ದು, ಇದರಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿ: ಇನ್ನರ್ ರಿಂಗ್ ಮೆಟ್ರೋ ಯೋಜನೆ ಕೈಬಿಡಲು ಪ್ಲ್ಯಾನ್
ನೌಕರರಿಗೆ ಪ್ರತಿ ತಿಂಗಳು 1500 ರೂಪಾಯಿ ಬೆಲೆಯ ಪಾಸ್
ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ನೂರಾರು ಐಟಿ ಬಿಟಿ ಕಂಪನಿಗಳಿದ್ದು, ಈ ಕಂಪನಿಗಳಲ್ಲಿ ಕೆಲಸ ಮಾಡಲು ಪ್ರತಿದಿನ ಲಕ್ಷಾಂತರ ನೌಕರರು ಸ್ವಂತ ಕಾರು, ಬೈಕ್, ಕಂಪನಿ ಕ್ಯಾಬ್ಗಳಲ್ಲಿ ಬರುವುದರಿಂದ ಸಿಲ್ಕ್ ಬೋರ್ಡ್ ಭಾಗದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ನಿಲ್ಲುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಸ್ಥೆಯು ನೌಕರರಿಗೆ ಪ್ರತಿ ತಿಂಗಳು 1500 ರೂಪಾಯಿ ಮುಖ ಬೆಲೆಯ ಪಾಸ್ ನೀಡಲು ಚಿಂತಿಸಿದೆ. ಮುಂದಿನ ದಿನಗಳಲ್ಲಿ ಆ ಭಾಗದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೆಟ್ರೋ ಪಾಸ್ ನೀಡಲಿದ್ದು, ಇದರಿಂದ ಟೆಕ್ಕಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರಲಿದ್ದಾರೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆಯೂ ಕಡಿಮೆ ಆಗಲಿದೆ ಎಂದು ಐಟಿ ಬಿಟಿ ಅಸೋಸಿಯೇಷನ್ ವಕ್ತಾರ ಮಯೂರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



