ನನಗೆ ಬಿಡಿಎ ಸೈಟ್ ಬೇಕೇಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 12, 2022 | 12:54 PM

ಬಿಡಿಎ ಮಾಡುವ ಅವಸರಗಳಿಂದಾಗಿ ಅವಾಂತರಗಳು ಆಗುತ್ತಿವೆ. ಬಿಡಿಎ ನನಗೆ ಬದಲಿ ನಿವೇಶನ ಕೊಡಲೇಬೇಕು ಎಂದು ಆಗ್ರಹಿಸಿದರು.

ನನಗೆ ಬಿಡಿಎ ಸೈಟ್ ಬೇಕೇಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ತಮಗೆ ಮಂಜೂರು ಮಾಡಿದ್ದ ನಿವೇಶನವನ್ನು ಹಿಂಪಡೆಯುವಂತೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂಕೋರ್ಟ್​ ನೀಡಿರುವ ಆದೇಶವನ್ನು ಗೌರವಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸುಪ್ರೀಂಕೋರ್ಟ್​​ ಆದೇಶದಂತೆ ನಡೆದುಕೊಳ್ಳುತ್ತೇವೆ. ಬಿಡಿಎ ಮಾಡುವ ಅವಸರಗಳಿಂದಾಗಿ ಅವಾಂತರಗಳು ಆಗುತ್ತಿವೆ. ನನಗೆ ಬಿಡಿಎ ಬದಲಿ ನಿವೇಶನ ಕೊಡಲೇಬೇಕು ಎಂದು ಆಗ್ರಹಿಸಿದರು. ಬಿಡಿಎ ಅಧಿಕಾರಿಗಳು ನನ್ನಿಂದ ಹಣ ಕಟ್ಟಿಸಿಕೊಂಡಿದ್ದಾರೆ. ನಾನು ನ್ಯಾಯಯುತವಾಗಿಯೇ ನಿವೇಶನ ಖರೀದಿಸಿದ್ದೇನೆ. ಆದರೆ ಬಿಡಿಎ ಮಾಡಿದ ತಪ್ಪುಗಳಿಂದಾಗಿ ಸಮಸ್ಯೆ ಆಗುತ್ತಿದೆ. ಬಿಡಿಎ ಪರಿಸ್ಥಿತಿಯೇ ಸರಿಯಿಲ್ಲ. ಅಲ್ಲಿ ಎಲ್ಲವೂ ಅಯೋಮಯ ಎಂದರು.

ಎಸ್​ಸಿ, ಎಸ್​ಟಿ ಮೀಸಲಾತಿ ವಿಚಾರದಲ್ಲಿ ಕ್ರೆಡಿಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ 40 ವರ್ಷಗಳಿಂದ ದಲಿತರು ಮೀಸಲಾತಿ ಕೇಳುತ್ತಲೇ ಇದ್ದರು. ದಲಿತರಿಗೆ ಕಾಂಗ್ರೆಸ್​​ನವರು ಮೀಸಲಾತಿ ಕೊಡಲೇ ಇಲ್ಲ. ಅವರಿಗೆ ಮೀಸಲಾತಿ ಕೊಡಲು ನಿರ್ಧರಿಸಿದ್ದು ಬಿಜೆಪಿ. ಹೀಗಾಗಿ ಸಹಜವಾಗಿ ನಮಗೆ ಅದರ ಕ್ರೆಡಿಟ್ ಸೇರುತ್ತದೆ. ದಲಿತ ಸಮುದಾಯಕ್ಕೆ ಬಿಜೆಪಿ ನ್ಯಾಯ ಒದಗಿಸಿದೆ. ಸಹಜವಾಗಿಯೇ ಅದರ ಕ್ರೆಡಿಟ್ ನಮಗೆ ಸೇರುತ್ತದೆ ಎಂದರು.

ಎಸ್​.ಟಿ.ಸೋಮಶೇಖರ್ ಮೇಲಿನ ಎಫ್​ಐಆರ್ ರದ್ದುಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಮಶೇಖರ್​​ ರಾಜೀನಾಮೆಗೆ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​ ಪಕ್ಷದಲ್ಲೂ ಹಲವರು ಬೇಲ್ ಮೇಲೆ ಹೊರಗಿದ್ದಾರೆ. ಕಾನೂನು ಕಾಯ್ದೆ ಪ್ರಕಾರ ಸೋಮಶೇಖರ್ ನಡೆದುಕೊಳ್ಳುತ್ತಾರೆ ಎಂದರು. ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್​ನವರ ಪೈಕಿಯೂ ಹಲವು ಬೇಲ್ ಮೇಲೆ ಹೊರಗಿದ್ದಾರೆ ಎಂದರು.

ಬದಲಿ ನಿವೇಶನ ವಾಪಸ್​ಗೆ ಸುಪ್ರೀಂಕೋರ್ಟ್‌ ಆದೇಶ

ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಬದಲಿ ನಿವೇಶನಗಳನ್ನು ಕಾನೂನು ಪ್ರಕ್ರಿಯೆಗಳ ಅನುಸಾರ ವಾಪಸ್‌ ಪಡೆಯುವಂತೆ ಬಿಡಿಎ ಗೆ ಮಂಗಳವಾರ ಆದೇಶ ನೀಡಿದೆ. ಮಂಜೂರಾತಿ ರದ್ದುಗೊಳಿಸುವುದಷ್ಟೇ ಸಾಲದು. ಮಾಲೀಕರಿಂದ ಅವುಗಳನ್ನು ಮರಳಿ ಸ್ವಾಧೀನಕ್ಕೆ ಪಡೆಯಬೇಕು ಎಂದು ತಾಕೀತು ಮಾಡಿದೆ.

Published On - 12:54 pm, Wed, 12 October 22