ಕರ್ನಾಟಕದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಬಂದೋಬಸ್ತ್​ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 30, 2022 | 11:53 AM

ಈ ರೀತಿಯ ಸ್ಟಂಟ್​​ಗಳಿಂದ ಲಾಭ ಆಗಬಹುದು ಎಂದುಕೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಬಂದೋಬಸ್ತ್​ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಪಾದಯಾತ್ರೆ’ ಕರ್ನಾಟಕವನ್ನು ಪ್ರವೇಶಿಸಿದ್ದು, ಪಾದಯಾತ್ರೆ ಸಾಗುವ ಎಲ್ಲ ಸ್ಥಳಗಳಲ್ಲಿ ಬಂದೋಬಸ್ತ್​ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಪೊಲೀಸರಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರವಹಿಸಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಪಾದಯಾತ್ರೆ ನಡೆಸುವ ಮಾರ್ಗದುದ್ದಕ್ಕೂ ಬಿಜೆಪಿ ಪೋಸ್ಟರ್​​ ಅಂಟಿಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಎಂದ ಮೇಲೆ ಇವೆಲ್ಲವೂ ಸಹಜವೇ ಅಲ್ಲವೇ? ಪೋಸ್ಟರ್ ಅಂಟಿಸುವುದನ್ನು ಮೊದಲು ಶುರು ಮಾಡಿದ್ದೆ ಅವರು (ಕಾಂಗ್ರೆಸ್). ಈ ರೀತಿಯ ಸ್ಟಂಟ್​​ಗಳಿಂದ ಲಾಭ ಆಗಬಹುದು ಎಂದುಕೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರ ಫ್ಲೆಕ್ಸ್ ಹರಿದು ಹಾಕಿರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಯಾರ ಮೇಲೆ ಏನು ಬೇಕಾದರೂ ಹೇಳುತ್ತಾರೆ. ಯಾವುದಾದರೂ ಒಂದು ಕುಂಟು ನೆವ ಅವರಿಗೆ ಬೇಕಾಗಿದೆ. ಹೀಗಾಗಿ ಹೀಗೆಲ್ಲಾ ಮಾತಾಡ್ತಾರೆ. ಇದು ಚುನಾವಣೆಗಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿರುವ ರೀತಿ. ಇಡೀ ದೇಶದ ಜನ ಅವರನ್ನು ತಿರಸ್ಕರಿಸಿದ್ದಾರೆ. ರಾಜ್ಯದ ಜನರೂ ಅವರನ್ನು ಪುರಸ್ಕರಿಸುತ್ತಾರೆ ಎಂಬ ಭರವಸೆ ಇಲ್ಲ. ಜನರ ಮೇಲೆ ಏನೆಲ್ಲಾ ಪ್ರಯೋಗ ಮಾಡುತ್ತಿದ್ದಾರೆ. ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ ಎಂದರು.

ಆರ್​ಎಸ್​ಎಸ್​ ನಿಷೇಧ ಹೇಳಿಕೆಯೇ ದೊಡ್ಡ ದುರ್ದೈವ: ಸಿಎಂ ಬೊಮ್ಮಾಯಿ

ವಿಜಯಪುರ: ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲಾ ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿರುವ ಅವರು, ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಪಿಎಫ್​ಐ ಏಕೆ ನಿಷೇಧಿಸಿದ್ರಿ ಎಂದು ಕೇಳಲು ಇವರಿಗೆ ಆಧಾರವಿಲ್ಲವೇ? ಪಿಎಫ್​ಐ ಮೇಲಿದ್ದ ಪ್ರಕರಣಗಳನ್ನು ಇವರೇ ಹಿಂಪಡೆದಿದ್ದರು. ಅದನ್ನು ಮರೆಮಾಚಲು ಆರ್​ಎಸ್​ಎಸ್​ ನಿಷೇಧಿಸಿ ಎಂದು ಹೇಳುತ್ತಿದ್ದಾರೆ. ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್​ಎಸ್​ಎಸ್​ ಎಂದು ವಿವರಿಸಿದರು. ದೇಶವು ಸಮಸ್ಯೆಗಳಿಗೆ ಸಿಲುಕಿದಾಗ ಆರ್​ಎಸ್​ಎಸ್​ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.

ಮುಸ್ಲಿಮರನ್ನು ಓಲೈಸುತ್ತಿರುವ ಸಿದ್ದರಾಮಯ್ಯ: ಈಶ್ವರಪ್ಪ

ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನು ಬಲವಾಗಿ ವಿರೋಧಿಸಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಗಾಂಧಿ ವಂಶವೇ ಮನಸ್ಸು ಮಾಡಿದರೂ ಆರ್​ಎಸ್​ಎಸ್​ನ ಒಂದು ಕೂದಲು ಅಲ್ಲಾಡಿಸಲು ಆಗಲಿಲ್ಲ. ಮುಸ್ಲಿಮರನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ ಇಂಥ ಹೇಳಿಕೆ ಕೊಡುತ್ತಿದ್ದಾರೆ. ಆರ್​ಎಸ್​ಎಸ್​ ಸಂಘಟನೆ ಜಗಕ್ಕೆ ಬೆಳಕು ನೀಡುವ ಸೂರ್ಯನಿದ್ದಂತೆ. ಆರ್​ಎಸ್​ಎಸ್​ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಆರ್​ಎಸ್​ಎಸ್​ನ ದೇಶಭಕ್ತ ಕೂಸು ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು.