ಬೆಂಗಳೂರು: ನಿನ್ನೆ ಸಂಜೆಯಿಂದ ಸುರಿದ ಭಾರೀ ಮಳೆಗೆ ತಡರಾತ್ರಿ ನಂದಿನಿಲೇಔಟ್ ಮುಖ್ಯರಸ್ತೆಯ 11 ನೇ ಕ್ರಾಸ್ ಬಳಿಯ ಮನೆ ಮೇಲೆ ಬೃಹತ್ ಮರ ಉರುಳಿಬಿದ್ದಿದೆ. ಬೃಹತ್ ಮರ ಉರುಳಿದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬ ತುಂಡಾಗಿದೆ. ತುಂಡಾದ ವಿದ್ಯುತ್ ಕಂಬ ಮನೆ ಮೇಲೆ ವಾಲಿದೆ. ಮರ ಉರುಳಿಬಿದ್ದ ಮನೆ ಬಳಿಗೆ ಬಿಬಿಎಂಪಿ ಅರಣ್ಯ ಘಟಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯುತ್ ಕಂಬ ಉರುಳಿ ವಿದ್ಯುತ್ ಪ್ರವಹಿಸುತ್ತಿರುವ ಹಿನ್ನೆಲೆ, ಮನೆ ಮೇಲೆ ಬಿದ್ದಿರುವ ಮರ ತೆರವುಗೊಳಿಸಲು ಅಡ್ಡಿಯಾಗಿದೆ. ಮಲ್ಲೇಶ್ವರಂ ಮುಖ್ಯ ರಸ್ತೆಯಲ್ಲಿ ಫುಟ್ ಪಾತ್ ಮೇಲೆ ಬೃಹತ್ ಮರ ಉರುಳಿಬಿದ್ದಿದೆ. ಇದರಿಂದ ಗೌರಿ ಗಣೇಶ ಹಬ್ಬದ ಹಿನ್ನೆಲೆ ರೈತರು ಮಾರಾಟ ಮಾಡಲು ತಂದಿದ್ದ ಬಾಳೆಕಂದು, ಹಣ್ಣು-ಹಂಪಲು, ತಳಿರು ತೋರಣ ಮರದ ಕೆಳಗೆ ಸಿಲುಕಿ ಮಳೆ ನೀರು ಪಾಲಾಗಿವೆ.
ರಸ್ತೆ ಬದಿ ಫುಟ್ ಪಾತ್ ಕಾಮಗಾರಿಗೆ ಮಣ್ಣು ಅಗೆದಿರುವ ಹಿನ್ನೆಲೆ ಸತತ ಮಳೆಯಿಂದ ಮಣ್ಣು ಸಡಿಲಗೊಂಡು ಬೃಹತ್ ಮರ ಧರೆಶಾಹಿಯಾಗಿದೆ. ಯಶವಂತಪುರ ಮುಖ್ಯ ರಸ್ತೆ ಸಮೀಪ ಬೃಹತ್ ತಡರಾತ್ರಿ ಮರದ ಕೊಂಬೆ ಉರುಳಿಬಿದ್ದಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆ ಬಿಬಿಎಂಪಿ ಅರಣ್ಯ ಘಟಕ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.
ನಿನ್ನೆ ರಾತ್ರಿ ನಗರದಲ್ಲಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಬಿಳೇಕಹಳ್ಳಿ ಸಮೀಪದ ಅನುಗ್ರಹ ಲೇಔಟ್ ಪೂರ್ತಿ ನೀರು ನಿಂತಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಲೇಔಟ್ ನಲ್ಲಿ ಮಳೆ ನೀರು ಸಂಗ್ರಹವಾಗಿ ಸಮಸ್ಯೆಯಾಗುತ್ತಿದೆ. ಯಶವಂತಪುರದ ಪೊಲೀಸ್ ಠಾಣೆ ರಸ್ತೆಗೆ ಅಡ್ಡಲಾಗಿ ಮರದ ಬೃಹತ್ ಕೊಂಬೆ ಬಿದ್ದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿಯಲ್ಲಿ ಕಳೆದ 1 ಗಂಟೆಯಿಂದ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ವಾಹನಗಳು ಕೆಟ್ಟು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ತಗ್ಗುಪ್ರದೇಶದ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಜನೆಉ ಪರದಾಡುತ್ತಿದ್ದಾರೆ.
ರಾತ್ರಿ ಸುರಿದ ಮಳೆಯಿಂದಾಗಿ ಬೊಮ್ಮನಹಳ್ಳಿಯ ಎರಡು ಬಡಾವಣೆಗಳು ಜಲಾವೃತಗೊಂಡಿವೆ. ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 am, Tue, 30 August 22