ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಣೆ ವಿಚಾರ: ಇಂದು ಮೇಲ್ಮನವಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ಬೆಂಗಳೂರು: ಚಾಮರಾಜಪೇಟೆ (Chamrajpet) ಈದ್ಗಾ ಮೈದಾನ (Idgah Maidan) ಗಣೇಶೋತ್ಸವ (Ganesh Chaturthi) ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ವಿಚಾರಣೆ ನಡೆಸಲಿದೆ. ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಮುಸ್ಲಿಂ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಇಂದು ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ರಾಜ್ಯ ಸರ್ಕಾರದ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನದ ಗಣೇಶೋತ್ಸವ ತೀವ್ರ ಕುತೂಹಲ ಕೆರಳಿಸಿದೆ. ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದ್ದು, 3 ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್ಗಳು, 130 ಪಿಎಸ್ಐ, 126 ASI, 900 ಕಾನ್ಸ್ಟೇಬಲ್ಗಳು, 120 RAF ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮೈದಾನದ ಭದ್ರತೆಗೆ ಒಟ್ಟು 1,500 ಪೊಲೀಸರು ಇಂದು ಸಂಜೆಯಿಂದಲೇ ನಿಯೋಜನೆಗೊಳ್ಳಲಿದ್ದಾರೆ.
ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ ಗಣೇಶ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದೇವೆ. ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ರೂಟ್ ಮಾರ್ಚ್ ಮಾಡಿದ್ದೇವೆ ಎಂದರು.
ಚಾಮರಾಜಪೇಟೆಯಲ್ಲಿ ಮೂರು ದಿನಗಳ ಕಾಲ ಬಿಗಿ ಭದ್ರತೆ ಇರಲಿದೆ. ಹೆಚ್ಚಿನ ನಿಗಾ ಇಡಲು ಡ್ರೋನ್ ಕೂಡ ಬಳಕೆ ಮಾಡಲಾಗುತ್ತೆ. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಗಣೇಶೋತ್ಸವ ಶಾಂತಿಯುತವಾಗಿ ಆಗುತ್ತೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Tue, 30 August 22