ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevaka Sangha – RSS) ವಿಚಾರಧಾರೆಗೆ ತಲೆಬಾಗಿದ್ದೇನೆ. ಆರ್ಎಸ್ಎಸ್ ಬಗ್ಗೆ ನನಗೆ ತುಂಬಾ ಗೌರವವಿದೆ. ಆ ತತ್ವ ಸಿದ್ಧಾಂತದ ಆಧಾರದ ಮೇಲೆಯೇ ದೇಶ ಕಟ್ಟಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ, ಕರುನಾಡ ಜಾತ್ರೆ’ (Azadi Ka Amrit Mahotsav) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರ ಸಾವರ್ಕರ್ ದೇಶ ವಿಭಜನೆ ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇತಿಹಾಸ ಬಲ್ಲವರು, ಇತಿಹಾಸ ಬರೆಯಬಲ್ಲರು. ಸ್ವಾತಂತ್ರ್ಯ ಹೋರಾಟದ ಇತಿಹಾಸ ಎಂದಿಗೂ ಬದಲಾಗುವುದಿಲ್ಲ ಎಂದರು. ನಾವು ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೊ ಹಾಕದಿದ್ದಕ್ಕೆ ಕಾಂಗ್ರೆಸ್ನವರಿಗೆ ಬೇಸರವಾಗಿದೆ. ಜವಾಹರ್ ಲಾಲ್ ನೆಹರೂ ಅವರ ಬಗ್ಗೆ ನಮಗೂ ಗೌರವ ಇದೆ. ಅವರನ್ನು ನಾವು ಮರೆತಿಲ್ಲ, ಅವರ ಕೆಲಸವನ್ನೂ ಮರೆತಿಲ್ಲ. ನೆಹರು ಅವರಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಗೌರವ ಕೊಟ್ಟಿದ್ದಾರೆ. ನೆಹರು ಅವರಿಂದ ಹಿಡಿದು ವಾಜಪೇಯಿ ಅವರವರೆಗೂ ಹಲವು ಪ್ರಧಾನಿಗಳು ತಮ್ಮ ಕಾಲಘಟ್ಟದಲ್ಲಿ ಕೊಟ್ಟ ಕೊಡುಗೆಗಳ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ ಎಂದರು.
ಈಗ ಸತ್ಯವನ್ನು ಹೇಳುವ ಕಾಲ ಬಂದಿದೆ. ಕೆಲವರು ಸತ್ಯ ಮರೆಮಾಚುವ ಕೆಲಸ ಮಾಡಿದರು. ಕೆಲವರ ಹೆಸರುಗಳನ್ನು ಇತಿಹಾಸದಲ್ಲಿ ಬರೆದಿಲ್ಲ. ಸ್ವಾತಂತ್ರ್ಯ ಬಂದ ದಿನವೇ ಭಾರತ ದೇಶದ ವಿಭಜನೆಯಾಗಿತ್ತು. ಇದಕ್ಕಿಂತ ದುರ್ದೈವ ಬೇರೆ ಇಲ್ಲ ಎಂದರು.
Live : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಅಮೃತ ಭಾರತಿಗೆ ಕರುನಾಡ ಜಾತ್ರೆ” ಕಾರ್ಯಕ್ರಮ
ಉಪಸ್ಥಿತಿ : ರಾಜ್ಯಾಧ್ಯಕ್ಷರಾದ ಶ್ರೀ @nalinkateel, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಸಚಿವರು ಮತ್ತು ಪ್ರಮುಖರು.#IndiaIndependenceDay https://t.co/f5rsZp910e
— BJP Karnataka (@BJP4Karnataka) August 15, 2022
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಕ್ಷದ ವತಿಯಿಂದ ರಾಷ್ಟ್ರ ಧ್ವಜಾರೋಹಣ ನಡೆಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಸಚಿವರಾದ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಸಂಸದರಾದ ಪಿ.ಸಿ.ಮೋಹನ್, ಲೆಹರ್ ಸಿಂಗ್ ಉಪಸ್ಥಿತರಿದ್ದರು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಂದ ಜಾಥಾದ ಮೂಲಕ ಬಿಜೆಪಿ ಕಾರ್ಯಕರ್ತರು ಕ್ರೀಡಾಂಗಣಕ್ಕೆ ಆಗಮಿಸಿದರು.
ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ರಾಯಣ್ಣ ಪ್ರತಿಮೆಗೆ ಸಿಎಂ ಬೊಮ್ಮಾಯಿಗೆ ಕಂಬಳಿ ಹೊದಿಸಿ, ಮಾಲಾರ್ಪಣೆ ಮಾಡಿದರು.