ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜೀನಾಮೆ ಬಳಿಕ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ರಾಜೀನಾಮೆ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾಗೆ ಕೃತಜ್ಞತೆ ಸಲ್ಲಿಸುತ್ತೇನೆ. 75 ವರ್ಷ ದಾಟಿದ ಬಳಿಕ ಯಾರಿಗೂ ಅಧಿಕಾರ ಕೊಟ್ಟಿಲ್ಲ. ಆದರೆ ನನಗೆ ಅಂತಹ ಅವಕಾಶವನ್ನು ಕೊಟ್ಟಿದ್ದಾರೆ. ಹೀಗಾಗಿ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. 2 ತಿಂಗಳ ಹಿಂದೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಸರ್ಕಾರಕ್ಕೆ 2 ವರ್ಷ ಆಗಲಿ ಎಂದು ಕಾಯುತ್ತಿದ್ದೆ. ಹೀಗಾಗಿ ಸರ್ಕಾರಕ್ಕೆ 2 ವರ್ಷವಾದ ಬಳಿಕ ರಾಜೀನಾಮೆ ನೀಡಿದ್ದೇನೆ. 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಜ್ಯದ ಜನತೆ, ಶಿಕಾರಿಪುರದ ಜನತೆ, ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಎಂದು ಬಿಎಸ್‌ವೈ ಅಭಿಂದನೆ ಸಲ್ಲಿಸಿದರು.
ಮುಂದಿನ ಸಿಎಂ ಹೆಸರನ್ನು ನಾನು ಸೂಚಿಸಲು ಹೋಗಲ್ಲ
ನನ್ನ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ. ದೆಹಲಿಯಿಂದ ನನಗೆ ಯಾವುದೇ ಒತ್ತಡ ಇರಲಿಲ್ಲ. ನಾನೇ ನಿರ್ಧಾರ ಮಾಡಿ ರಾಜೀನಾಮೆಯನ್ನ ಸಲ್ಲಿಸಿದ್ದೇನೆ. ಸ್ವಯಂಪ್ರೇರಿತನಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದಿನ ಸಿಎಂ ಹೆಸರನ್ನು ನಾನು ಸೂಚಿಸಲು ಹೋಗಲ್ಲ. ಯಾವುದೇ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಹೈಕಮಾಂಡ್ ಮುಂದಿನ ಸಿಎಂ ಯಾರೆಂದು ತೀರ್ಮಾನಿಸುತ್ತೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ. ನಾಳೆಯಿಂದಲೇ ಒಟ್ಟಾಗಿ ಪಕ್ಷದ ಕೆಲಸವನ್ನು ಮಾಡುತ್ತೇನೆ. ರಾಜ್ಯಪಾಲರು ನನ್ನ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ನಾನು ರಾಜ್ಯ ರಾಜಕೀಯದಲ್ಲೇ ಇರುತ್ತೇನೆ. ಯಾವುದೇ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸುವುದಿಲ್ಲ. ಮುಂದಿನ ಸಿಎಂಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಬೆಂಬಲ ಸೂಚಿಸಿದ ಸ್ವಾಮೀಜಿಗಳಿಗೆ ಧನ್ಯವಾದ
ರಾಜ್ಯದ ಸ್ವಾಮೀಜಿಗಳು ನನಗೆ ಬೆಂಬಲವನ್ನು ಸೂಚಿಸಿದ್ದಾರೆ. 500ಕ್ಕೂ ಹೆಚ್ಚು ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇಂತಹ ಬೆಂಬಲ ಯಾರಿಗೂ ಸಿಕ್ಕಿಲ್ಲ. ನನಗೆ ಬೆಂಬಲ ಸೂಚಿಸಿದ ಸ್ವಾಮೀಜಿಗಳಿಗೆ ಧನ್ಯವಾದ ಎಂದು ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ಸ್ವಾಮೀಜಿಗಳು ಮುಂದಿನ ಸಿಎಂಗೂ ಸಹಕಾರ ನೀಡಬೇಕು ಎಂದು ಮನವಿ ಸಲ್ಲಿಸಿದ್ರು.
ಇದನ್ನೂ ಓದಿ: Karnataka Politics LIVE: ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ಗಾಳಿ; ಮುಂದಿನ ಮುಖ್ಯಮಂತ್ರಿ ಯಾರು?
Published On - 1:27 pm, Mon, 26 July 21