ಬೆಂಗಳೂರು : ಜಿಮ್ ತರಬೇತುದಾರನ ಸಮಯಪ್ರಜ್ಞೆ ಹಾಗೂ ವೈದ್ಯರ ಸಕಾಲಿಕ ಚಿಕಿತ್ಸೆಯಿಂದ ವ್ಯಕ್ತಿಯೋರ್ವರು ಬದುಕುಳಿದ ಅಪರೂಪದ ಘಟನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಹೃದಯಸ್ತಂಭನಕ್ಕೆ ಒಳಗಾಗಿ ಸಾವಿನ ಕದ ತಟ್ಟಿದ್ದ ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಗುರುದತ್ತ ಸಾವನ್ನು ಜಯಿಸಿದ ಅದೃಷ್ಟವಂತರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರತಿನಿತ್ಯ ಜಿಮ್ ನಲ್ಲಿ ವರ್ಕೌಟ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದ ಅವರಿಗೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇರಲಿಲ್ಲ. ಯಾವುದೇ ದುಶ್ಚಟಗಳೂ ಇಲ್ಲದ ಇವರು ಆರೋಗ್ಯವಂತರಾಗಿಯೇ ಇದ್ದರು. ಆದರೆ ಕಳೆದ ಸೋಮವಾರ ( 29-11-2021) ಮಾತ್ರ ಅವರ ಆರೋಗ್ಯ ಸ್ಥಿತಿ ಎಂದಿನಂತಿರಲಿಲ್ಲ. ವರ್ಕೌಟ್ ಮುಗಿಸಿ ಬೆಳಗ್ಗೆ ಹನ್ನೊಂದರ ಸುಮಾರಿಗೆ ಹೊರಬಂದ ಅವರಿಗೆ ಎದೆ ನೋವಿನ ಜೊತೆಗೆ ತಲೆ ತಿರುಗಿದಂತಾಗಿ ಆಯಾಸ ಕಾಣಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೇ ಇದ್ದ ಕಾರಣ ಆತಂಕಗೊಂಡ ಅವರು ತಮ್ಮ ತರಬೇತುದಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಷ್ಟರಲ್ಲಾಗಲೇ ಅವರ ದೇಹಸ್ಥಿತಿ ಗಂಭೀರವಾಗುತ್ತಿದ್ದುದನ್ನು ಗಮನಿಸಿದ ತರಬೇತುದಾರ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ತಮ್ಮದೇ ಕಾರಿನಲ್ಲಿ ನೇರವಾಗಿ ಸಾಗರ್ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ತಪಾಸಣೆಯ ವೇಳೆ ಅವರಿಗೆ ಹೃದಯಾಘಾತವಾಗಿರುವುದು ಖಚಿತ ಪಡಿಸಿಕೊಂಡ ಡಾ. ಕೆ.ಎಸ್ ಕಿಶೋರ್ ನೇತೃತ್ವದ ತಂಡ ಇನ್ನೇನು ಚಿಕಿತ್ಸೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಗುರುದತ್ರ ಹೃದಯ ಸ್ತಂಭನವಾಗಿ ಎದೆ ಬಡಿತ ನಿಂತು ಹೋಗಿದೆ.
ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಆರಂಭಿಸಿದ ಡಾ. ಕಿಶೋರ್ ಹೃದಯದ ಬಡಿತವನ್ನ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಗುರುದತ್ ಇದೀಗ ಸಂಪೂರ್ಣ ಗುಣಮುಖರಾಗಿದ್ದು ಕೇವಲ ಐದೇ ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಅವರು, ತಮಗೆ ನೆರವಾದ ಜಿಮ್ ತರಬೇತುದಾರ ಹಾಗೂ ಸಾಗರ್ ಆಸ್ಪತ್ರೆಯ ಡಾ. ಕೆ.ಎಸ್ ಕಿಶೋರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಕಳೆದ ನವೆಂಬರ್ 27 ರಂದು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ಬಂದಿದ್ದ ರೋಗಿಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಅವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಗೋಲ್ಡನ್ ಅವರ್ ಒಳಗೆ ಅವರು ಆಸ್ಪತ್ರೆಗೆ ಬಂದಿದ್ದ ಕಾರಣ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಇತ್ತೀಚೆಗೆ ಮೃತರಾದ ಕನ್ನಡದ ಹೆಸರಾಂತ ಚಿತ್ರನಟರೊಬ್ಬರು ಇದೇ ರೀತಿ ಹೃದಯಸ್ತಂಭನಕ್ಕೆ ಒಳಗಾಗಿದ್ದರು ಅನ್ನೋದು ಗಮನಾರ್ಹ ವಿಚಾರ. ಹೃದಯಾಘಾತದಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಜೊತೆಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದಲ್ಲಿ ರೋಗಿಯ ಪ್ರಾಣ ಉಳಿಸಲು ಸಾಧ್ಯ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಪ್ರತೀ ವರ್ಷಕ್ಕೊಮ್ಮೆಯಾದರೂ ಪ್ರತಿಯೊಬ್ಬರೂ ಹೃದಯದ ತಪಾಸಣೆ ಮಾಡಿಸಿ ಕೊಳ್ಳುವುದು ಅತ್ಯವಶ್ಯಕ.
ಇದನ್ನೂ ಓದಿ:
ಅಪಾಯದಲ್ಲಿರುವ ದೇಶಗಳಿಂದ 16,000 ಪ್ರಯಾಣಿಕರ ಆಗಮನ; 18 ಮಂದಿ ಕೊವಿಡ್ ಪಾಸಿಟಿವ್: ಸರ್ಕಾರ
Viral Video: ಕೆರಳಿದ ಆನೆಯಿಂದ ಸಫಾರಿ ಜೀಪ್ ಮೇಲೆ ದಾಳಿ; ಕಂಗಾಲಾಗಿ ಓಡಿದ ಪ್ರವಾಸಿಗರು
Published On - 7:23 pm, Fri, 3 December 21