ವೋಟರ್ ಐಡಿ ಅಕ್ರಮ: ಚಿಲುಮೆ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್
ಚಿಲುಮೆ ಸಂಸ್ಥೆಯ ಸಿಬ್ಬಂದಿಯನ್ನು ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ 8 ದಿನ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 37ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಚಿಲುಮೆ ಸಂಸ್ಥೆಯ ಸಿಬ್ಬಂದಿ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ನನ್ನು 8 ದಿನ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 37ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ಮಾಹಿತಿ ಸಂಗ್ರಹ ಆರೋಪ ಕೇಳಿಬಂದಿತ್ತು. ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು ಸಂಸ್ಥೆಯ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಬಳಿಕ ಆರೋಪಿಗಳನ್ನು ಪೊಲೀಸರು 37 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಹೆಚ್ಚಿನ ವಿಚಾರಣೆಗೆಂದು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದಿದ್ದಾರೆ.
ಚಿಲುಮೆ ಮುಖ್ಯಸ್ಥ ರವಿಕುಮಾರ್ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ
‘ಚಿಲುಮೆ’ ಮುಖ್ಯಸ್ಥ ರವಿಕುಮಾರ್ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ ಪಡೆಯಲಾಗಿದೆ. ಚಿಲುಮೆ ಸಂಸ್ಥೆ ನಿರ್ದೇಶಕಿ ಆಗಿರುವ ರವಿಕುಮಾರ್ ಪತ್ನಿ ಐಶ್ವರ್ಯ ಹಾಗೂ ಟಿ.ಬೇಗೂರು ತೋಟದ ಮನೆಗೆ ದಾಖಲಾತಿ ಸಾಗಿಸಿದ್ದ ಕೃಷ್ಣೇಗೌಡ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಹಲಸೂರು ಗೇಟ್ ಪೊಲೀಸರು ನಿನ್ನೆ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಇಂದು ಬೆಂಗಳೂರಿನ 1ನೇ ACMM ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಲಿದ್ದಾರೆ. ನಿನ್ನೆ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಹೋಗುವ ಮೊದಲೇ ಸಾಕಷ್ಟು ಕಂಪ್ಯೂಟರ್ ಹಾಗು ಲ್ಯಾಪ್‌ಟಾಪ್ ನಾಪತ್ತೆಯಾಗಿದೆ. ಒಂದೇ ಒಂದು ಲ್ಯಾಪ್ ಟಾಪ್, ಕಂಪ್ಯೂಟರ್ ಇಲ್ಲದಂತೆ ಚಿಲುಮೆ ಸಿಬ್ಬಂದಿ ಮಾಡಿದ್ದಾರೆ. ಸದ್ಯ ಪೊಲೀಸರು ಕಚೇರಿ ಸಿಸಿಟಿವಿ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಪೊಲೀಸರು ದಾಳಿ ಮಾಡುವ ತನಕವೂ ಡಿವಿಆರ್ ರೆಕಾರ್ಡ್ ನಲ್ಲಿಯೇ ಇತ್ತು. ಹೀಗಾಗಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಡಿವಿಆರ್ ಮೂಲಕ ಯಾರು ಯಾರು ಬರ್ತಿದ್ದಾರೆ, ಹೋಗುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಯಲ್ಲಿ ಲ್ಯಾಪ್ ನಲ್ಲಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಇದೆ. ಆದ್ರೆ ಲ್ಯಾಪ್‌ಟಾಪ್ ಪತ್ತೆಯಾಗಿಲ್ಲ.
ಹಾಗೂ ಕಚೇರಿಯಲ್ಲಿ ಬಿಲ್ಗಳು, ಸುಮಾರು ಐವತ್ತಕ್ಕೂ ಹೆಚ್ಚು ಐಡಿ ಕಾರ್ಡ್ಗಳು ಲಭ್ಯವಾಗಿವೆ. ಇದೇ ಐಡಿ ಕಾರ್ಡ್ ಗಳನ್ನು ಬಳಸಿ ಸಾಕಷ್ಟು ಪ್ರಮಾಣದಲ್ಲಿ ಮತದಾರರ ಮಾಹಿತಿ ಸಂಗ್ರಹಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಾಲಿ ಸಚಿವರು ನೀಡಿರುವ ಚೆಕ್ ಹಾಗೂ ಇತರ ದಾಖಲಾತಿ, ಹೊಂಬಾಳೆ ಸಂಸ್ಥೆಗೆ ಸೇರಿದ್ದ ಒಂದಷ್ಟು ದಾಖಲೆಗಳನ್ನು ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Sat, 19 November 22