Bangalore G20 Meet: ಬೆಂಗಳೂರಿನಲ್ಲಿ ಡಿಸೆಂಬರ್ನಲ್ಲಿ ಜಿ20 ಸಭೆ; ವರದಿ
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮಾತ್ರವಲ್ಲದೆ ಇತರ ಜಾಗತಿಕ ನಾಯಕರೂ ಭಾಗವಹಿಸಲಿದ್ದಾರೆ. ಐಎಂಎಫ್, ಆರ್ಥಿಕ ಸಹಕಾರ ಕಾರ್ಯಾಚರಣೆ ಮತ್ತು ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಭಾರತವು ಜಿ20 (G20) ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಡಿಸೆಂಬರ್ನಲ್ಲಿ ಮೊದಲ ಸಭೆಗಳು ನಡೆಯಲಿವೆ. ಮೊದಲ ಎರಡು ಸಭೆಗಳಿಗೆ ಬೆಂಗಳೂರು (Bengaluru) ಆತಿಥ್ಯ ವಹಿಸಲಿದೆ ಎಂದು ವರದಿಯಾಗಿದೆ. ಡಿಸೆಂಬರ್ 13ರಿಂದ 15ರ ವರೆಗೆ ಮೊದಲ ಸಭೆ ನಡೆಯಲಿದೆ. ನಂತರ ಜಿ20 ಚೌಕಟ್ಟು ರೂಪಿಸುವ ಕಾರ್ಯಕಾರಿ ಸಮಿತಿ ಸಭೆ ಡಿಸೆಂಬರ್ 16 ಮತ್ತು 17ರಂದು ನಡೆಯಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ20 17ನೇ ಶೃಂಗಸಭೆಯಲ್ಲಿ ನವೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತದ ಅಧ್ಯಕ್ಷ ಸ್ಥಾನವು ಡಿಸೆಂಬರ್ 1, 2022 ರಿಂದ ಒಂದು ವರ್ಷದವರೆಗೆ ಇರಲಿದೆ.
ಮುಂದಿನ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 18ನೇ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಜಿ20 ರಾಷ್ಟ್ರಗಳ ನಾಯಕರ ಸಭೆಯ ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಸರಣಿ ಜಿ20 ಸಭೆಗಳನ್ನು ನಡೆಸಲು ಬಾರತ ಉದ್ದೇಶಿಸಿದೆ. ದೇಶದ ವಿವಿಧ ನಗರಗಳಲ್ಲಿ ಸಭೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಸಭೆಗಳು ರಾಜಸ್ಥಾನದ ಉದಯಪುರದಲ್ಲಿ ಡಿಸೆಂಬರ್ 4ರಿಂದ 7ರ ವರೆಗೆ ನಡೆಯಲಿದೆ. ಇದಾದ ಬಳಿಕ ಬೆಂಗಳೂರಿನಲ್ಲಿ ಎರಡು ಸಭೆಗಳು ನಡೆಯಲಿವೆ. ಈ ಸಭೆಗಳಲ್ಲಿ ಜಿ20 ದೇಶಗಳ ಹಿರಿಯ ಹಣಕಾಸು ಅಧಿಕಾರಿಗಳು, ಕೇಂದ್ರೀಯ ಬ್ಯಾಂಕ್ಗಳ ಡೆಪ್ಯುಟಿ ಗವರ್ನರ್ಗಳು ಭಾಗವಹಿಸಲಿದ್ದಾರೆ ಎಂದು ವರದಿ ಹೇಳಿದೆ.
ರಾಜ್ಯ ರಾಜಧಾನಿಗೆ ಬರಲಿದ್ದಾರೆ ಜಾಗತಿಕ ಗಣ್ಯರು
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮಾತ್ರವಲ್ಲದೆ ಇತರ ಜಾಗತಿಕ ನಾಯಕರೂ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಆರ್ಥಿಕ ಸಹಕಾರ ಕಾರ್ಯಾಚರಣೆ ಮತ್ತು ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಜಿ20 ಸರಣಿ ಸಭೆಗಳು
ಡಿಸೆಂಬರ್ನಲ್ಲಿ ನಡೆಯುವ ಎರಡು ಸಭೆಗಳು ಮಾತ್ರವಲ್ಲದೆ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಜಿ20 ಸರಣಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಜಿ20 ದೇಶಗಳ ಅಭಿವೃದ್ಧಿ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಡಿಸೆಂಬರ್ 13ರಿಂದ 16ರ ವರೆಗೆ ಮುಂಬೈಯಲ್ಲಿ ನಡೆಯಲಿದೆ. ಮೊದಲ ಆರೋಗ್ಯ ಮತ್ತು ಹಣಕಾಸು ಕಾರ್ಯಪಡೆ ಸಭೆ ಡಿಸೆಂಬರ್ 19ರಂದು ವರ್ಚುವಲ್ ಆಗಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಾಲಿಯಲ್ಲಿ ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ಪ್ರಧಾನಿ ಮೋದಿ