ಬೆಂಗಳೂರು: ದೇಶವನ್ನು ಒಗ್ಗೂಡಿಸಲು, ದೇಶಾಭಿಮಾನ, ಜನರನ್ನು ಒಗ್ಗೂಡಿಸಲು, ಸಾಮರಸ್ಯ ಮೂಡಿಸಲು, ಜನರ ಸಮಸ್ಯೆ ಅರಿಯಲು ರಾಹುಲ್ ಗಾಂಧಿಯಿಂದ ಪಾದಯಾತ್ರೆ ಮಾಡಲಾಗುತ್ತಿದೆ. ದೇಶದ 130 ಕೋಟಿ ಜನರು ಸಾಮರಸ್ಯದಿಂದ ಬದುಕಬೇಕಾಗಿದೆ. ಭಾರತ ಐಕ್ಯತಾ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು. ನಮ್ಮ ದೇಶದಲ್ಲಿ ಬಹುತ್ವವವನ್ನು ಒಪ್ಪಿಕೊಂಡಿದ್ದೇವೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಆಶಯವಾಗಿದೆ. ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆ ಆಧರಿಸಿ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಕ್ಕೆ ಡಾ.ಅಂಬೇಡ್ಕರ್ ಆದ್ಯತೆ ನೀಡಿದ್ದರು. ಸಾರ್ವಭೌಮತೆ ಸಂವಿಧಾನದ ಮೂಲ ಆಶಯವಾಗಿದೆ. ದೇಶ ಕೋಮುವಾದಿಗಳ ಕೈಗೆ ಸಿಕ್ಕಿ ನಲುಗುತ್ತಿದೆ, ರಕ್ಷಿಸಬೇಕಾಗಿದೆ. ಜಾತಿ, ಭಾಷೆ ಆಧಾರದಲ್ಲಿ ಜನರ ನಡುವೆ ಜಗಳ ತಂದಿಡುತ್ತಿದ್ದಾರೆ. ಸರ್ವರನ್ನೂ ಸಮಾನವಾಗಿ ನೋಡಬೇಕಾಗಿದ್ದವರೇ ವಿಭಜಿಸುತ್ತಿದ್ದಾರೆ ಎಂದು ಹೇಳಿದರು.
ಸಮ ಸಮಾಜವನ್ನು ನಿರ್ಮಾಣ ಮಾಡುವುದು ಕಾಂಗ್ರೆಸ್ ಉದ್ದೇಶ
ಈ ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು. ಸಮ ಸಮಾಜವನ್ನು ನಿರ್ಮಾಣ ಮಾಡುವುದು ಕಾಂಗ್ರೆಸ್ ಉದ್ದೇಶ. 600 ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭಾರತ ಸಾರ್ವಭೌಮ ಸರ್ವಸ್ವತಂತ್ರ ರಾಷ್ಟ್ರ ಆಗಬೇಕು ಅಂತ ಕಾಂಗ್ರೆಸ್ ಕೆಲಸ ಮಾಡಿದೆ. ದೇಶದ ಸಾಮಾಜಿಕ ಆರ್ಥಿಕ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆ ಆಗಿದೆ. ಕೋಮುವಾದಿಗಳಿಗೆ ಅಧಿಕಾರ ಸಿಕ್ಕಮೇಲೆ ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಅದಕ್ಕೋಸ್ಕರ ಕಾಂಗ್ರೆಸ್ ಜನರ ಮನಸ್ಸು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ನಾವೆಲ್ಲ ಅಣ್ಣ ತಮ್ಮಂದಿರು, ನಾವೆಲ್ಲ ಭಾರತೀಯರು ಎಂಬ ವಾತಾವರಣ ನಿರ್ಮಾಣ ಆಗಬೇಕು.
ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಮೂರನ್ನು ಬೇರ್ಪಡಿಸಿ ನೋಡಲು ಸಾಧ್ಯವೇ ಆಗುವುದಿಲ್ಲ. ಅದಕ್ಕೋಸ್ಕರ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸಾಮರಸ್ಯ ಐಕ್ಯತೆ ಸಾರುವುದಕ್ಕೆ ಯಾತ್ರೆ ನಡೆಯುತ್ತದೆ. ಜನರಲ್ಲಿ ಹೊಸ ಭರವಸೆ ವಿಶ್ವಾಸ ಮೂಡಿಸುವ ದೇಶಾಭಿಮಾನ ಮೂಡಿಸುವ ಯಾತ್ರೆ. ಸಾಮರಸ್ಯ ಹಾಳಾಗುತ್ತಿದೆ, ಸಾಮರಸ್ಯ ಸಾರುವ ಮನುಷ್ಯರಾಗಿ ಬಾಳುವ ಅನಿವಾರ್ಯತೆ ಹೇಳುವ ಕೆಲಸ ಪಾದಯಾತ್ರೆ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಹೊಸ ಟ್ರೆಂಡ್ ಸೆಟ್ ಮಾಡುತ್ತೆ: ಡಿ.ಕೆ ಶಿವಕುಮಾರ್
ಸುದ್ದಿಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಭಾರತ ಐಕ್ಯತೆ ಯಾತ್ರೆ ಗುಂಡ್ಲುಪೇಟೆಯಿಂದ ಪ್ರಾರಂಭ ಆಗತ್ತೆ. 600 ಜನ ದೇಶದ ನಾಯಕರು ಉದಯಪುರದ ಶಿಬಿರದಲ್ಲಿ ಚರ್ಚೆ ಮಾಡಿದ್ದೆವು. ಚರ್ಚೆಯ ಪ್ರಯುಕ್ತ ಭಾರತದ 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. 21 ದಿನ ಕರ್ನಾಟಕದಲ್ಲಿ ರೂಟ್ ಫಿಕ್ಸ್ ಮಾಡಿದ್ದೇವೆ. ಪ್ರತಿದಿನ 25 ಕಿಮೀ ನಂತೆ ಪಾದಯಾತ್ರೆ ನಡೆಯುತ್ತದೆ. ಭಾರತವನ್ನು ಒಗ್ಗೂಡಿಸುವ ಐಕ್ಯತೆ ಮಾಡುವ ಕೆಲಸ ಮಾಡುತ್ತೇವೆ. ಇದು ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ, ಭಾರತವನ್ನು ಓಗ್ಗೂಡಿಸುವ ಕೆಲಸದಲ್ಲಿ ಯಾರು ಬೇಕಾದರೂ ಹೆಜ್ಜೆ ಹಾಕಬಹುದು. ಬಳ್ಳಾರಿ ಮೇಕೆದಾಟು ಸ್ವಾತಂತ್ರ್ಯ ನಡಿಗೆ ಬಳಿಕ ಇದು ಮಹತ್ವ ಪಡೆದುಕೊಂಡಿದೆ.
ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಯುವಕರಿಗೆ ಉದ್ಯೋಗ ಸಿಗದೇ ಮಾನಸಿಕ ಒತ್ತಡ ಆಗ್ತಿದೆ. ಖಾಸಗಿಯಾಗಿ ಅಥವಾ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು. ರಾಜ್ಯದಲ್ಲಿ ಇರುವ ಪ್ರತಿ ರೈತನ ಬದುಕು ಹಸನಾಗಬೇಕು. ಎಲ್ಲರಿಗೂ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕು. ಹಸ್ತದಲ್ಲಿ 5 ಬೆರಳುಗಳು ಇರುವ ರೀತಿ ಪಂಚಸೂತ್ರದ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ. ಭಾರತ್ ಜೋಡೋ ಯಾತ್ರೆ ಹೊಸ ಟ್ರೆಂಡ್ ಸೆಟ್ ಮಾಡುತ್ತದೆ ಎಂಬ ನಂಬಿಕೆ ಇದೆ. ಇಡೀ ದೇಶಕ್ಕೆ ಈ ಯಾತ್ರೆ ಮಾದರಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಪಾದಯಾತ್ರೆ
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಲಿದ್ದು, ಸೆ.7ರಿಂದ 19 ದಿನ ಕೇರಳ, 4 ದಿನ ತಮಿಳುನಾಡಿನಲ್ಲಿ ಸಾಗುತ್ತೆ. ರಾಹುಲ್ ಗಾಂಧಿ ಜೊತೆಗೆ 125 ಜನರು ಪಾಲ್ಗೊಳ್ಳಲಿದ್ದಾರೆ. 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾದುಹೋಗುತ್ತೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕದಲ್ಲಿ 511 ಕಿ.ಮೀ., 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಕರ್ನಾಟಕದ 125 ಜನ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು.
Published On - 1:22 pm, Sun, 28 August 22