ದೇಶದ ಯುವಕರಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು

| Updated By: ಸುಷ್ಮಾ ಚಕ್ರೆ

Updated on: Sep 28, 2022 | 12:23 PM

ಇಡೀ ವಿಶ್ವದಲ್ಲಿ ಭಾರತದಲ್ಲೇ ಅತಿ ಹೆಚ್ಚು ಯುವಕರಿದ್ದು, ಅವರಿಗೆಲ್ಲ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಅಂತ ಗುಣಮಟ್ಟದ ಶಿಕ್ಷಣವನ್ನ ವಿಶ್ವವಿದ್ಯಾಲಯಗಳು ನೀಡಬೇಕಿದೆ ಎಂದು ರಾಷ್ಟ್ರಪತಿ ದೌರ್ಪದಿ ಮುರ್ಮು ಹೇಳಿದ್ದಾರೆ.

ದೇಶದ ಯುವಕರಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ‌ ಮುರ್ಮು
Follow us on

ಬೆಂಗಳೂರು: ಇಡೀ ವಿಶ್ವದಲ್ಲಿ ಭಾರತದಲ್ಲೇ ಅತಿ ಹೆಚ್ಚು ಯುವಕರಿದ್ದು, ಅವರಿಗೆಲ್ಲ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಅಂತ ಗುಣಮಟ್ಟದ ಶಿಕ್ಷಣವನ್ನ ವಿಶ್ವವಿದ್ಯಾಲಯಗಳು ನೀಡಬೇಕಿದೆ ಎಂದು ರಾಷ್ಟ್ರಪತಿ ದೌರ್ಪದಿ ಮುರ್ಮು (Draupadi Murmu) ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಂತ ಜೋಸೆಫ್ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ನಾವು 75 ನೇ ಅಮೃತಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಇನ್ನೂ 25 ವರ್ಷಗಳಲ್ಲಿ 100 ವರ್ಷದ ಸ್ವತಂತ್ರ್ಯೋತ್ಸವ ಆಚರಿಸಲಿದ್ದೇವೆ. ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ದಿ ರಾಷ್ಟ್ರದ ಅಭಿವೃದ್ದಿ. ಈ ಅಭಿವೃದ್ದಿ ಎಂದಿಗೂ ಕೊನೆಗೊಳ್ಳುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯದ ನಂತರ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶ ಆರ್ಥಿಕವಾಗಿ ಸಾಕಷ್ಟು ಬಲಿಷ್ಠವಾಗಿದೆ. ದೇಶದಲ್ಲಿ ಹಸಿರು ಕ್ರಾಂತಿಯ ನಂತರ ಕೃಷಿ ಕ್ಷೇತ್ರದಲ್ಲಿ, ಐಟಿ ಕ್ಷೇತ್ರ ಬಹಷ್ಟು ಅಭಿವೃದ್ದಿಯಾಗಿದೆ ಇನ್ನೂ 25 ವರ್ಷಗಳಲ್ಲಿ 100 ವರ್ಷದ ಸ್ವತಂತ್ರ್ಯೋತ್ಸವ ಆಚರಿಸಲಿದ್ದೇವೆ ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದ್ದು, ಇದಕ್ಕೆ ಯುವಕರ ಕೊಡುಗೆ ಅತ್ಯಗತ್ಯ ಎಂದು ಹೇಳಿದರು.

ನಾಡಿನ ಐತಿಹ್ಯವನ್ನು ಸ್ಮರಿಸಿದ ರಾಷ್ಟಪತಿ ದ್ರೌಪದಿ ಮುರ್ಮು

ವಿಧಾನಸೌಧದಲ್ಲಿ ಬ್ಯಾಂಕ್ವೆಟ್​​ ಹಾಲ್​ನಲ್ಲಿ ಇಂದು ರಾಜ್ಯ ಸರ್ಕಾರದ ವತಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನಾಗರಿಕ ಸನ್ಮಾನ ಮಾಡಿದರು. ಪೇಟ ತೊಡಿಸಿ, ಶ್ರೀಗಂಧ ಹಾರ ಮತ್ತು ಶ್ರೀಗಂಧದ ಬುದ್ಧನ ಮೂರ್ತಿ ನೀಡಿ ನಾಗರಿಕ ಸನ್ಮಾನ ಮಾಡಲಾಗಿದೆ.

ನಾಗರಿಕ ಸತ್ಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ತಾಯಿ ಭುವನೇಶ್ವರಿಗೆ ನಮಸ್ಕಾರ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಬಂದಿರುವ ಗಣ್ಯರು, ಸಾಧಕರು ನನಗೆ ರಾಜ್ಯದ ಸಂಸ್ಕೃತಿಯ ದರ್ಶನ ಮಾಡಿಸಿದ್ದಾರೆ. ನಾನು ಜನರ ಸೇವೆಗೆ ಇರುವ ಸೇವಕಿ. ದೇಶ ಅಮೃತ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆ. ಕರ್ನಾಟಕದಲ್ಲಿ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಣೆ ಮಾಡಿದ್ದಾರೆ. ಹರ್ಡೇಕರ್ ಮಂಜಪ್ಪ, ತಗಡೂರು ರಾಮಚಂದ್ರರಾವ್, ಯಶೋಧರಮ್ಮ ದಾಸಪ್ಪನವರು ಜೀವಿಸಿದ್ದ ನಾಡು ಇದು. ಬಾಣಾವರ ರಾಮಸ್ವಾಮಿಯವರಂಥ ಅಮರ ದೇಶಪ್ರೇಮಿಗೆ ಈ ನೆಲ ಜನ್ಮ ನೀಡಿದೆ ಎಂದು ನೆನೆದರು.

ಪಂಪ, ರನ್ನ, ಪೊನ್ನರ ನೆಲೆ ಬೀಡು ಇದು. ಬೇಲೂರು, ಹಳೇಬೀಡು, ಪಟ್ಟದ ಕಲ್ಲು ಐತಿಹಾಸಿಕ ಕ್ಷೇತ್ರಗಳು ಮಹತ್ವ ಪಡೆದುಕೊಂಡಿವೆ. ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಕೂಡಲ ಸಂಗಮ ಎಂಬ ಅದ್ಭುತ ವಚನ ಸಾಹಿತ್ಯವನ್ನು ಜಗತ್ತಿಗೆ ನೀಡಿದ ಬಸವಣ್ಣ, ಅಕ್ಕಮಹಾದೇವಿ, ಪುರಂದರದಾಸ, ಕನಕದಾಸರಂಥ ಮಹನೀಯರು ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು ಮುಂತಾದ ಸಾಹಿತಿ, ಕವಿಗಳು ಸಾಹಿತ್ಯದಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕನ್ನಡಿಗರು ಉದಾರರು, ಆದರ್ಶ ಪಾಲಕರು, ಶಾಂತಿಪ್ರಿಯರು. ಕರ್ನಾಟಕ ನನಗೆ ಮೆಚ್ಚಿನ ರಾಜ್ಯ. ಬೆಂಗಳೂರು ಚಂದದ ಊರು. ಇಲ್ಲಿನ ಶಾಂತಿ ಪ್ರಿಯ ಜನರ ಬಗ್ಗೆ ಜಗತ್ತೇ ಕೊಂಡಾಡುತ್ತದೆ. ಉತ್ತರ ಭಾರತದ ಹಲವು ಜನ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನವರ ಜೊತೆ ಇಲ್ಲಿಯವರಾಗಿಯೇ ಬೆರೆತುಹೋಗಿದ್ದಾರೆ. ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾತ್ರ ದೊಡ್ಡದು. ಎಫ್ ಡಿಐ ಸೆಳೆಯುವಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ಐದು ಟ್ರಿಲಿಯನ್ ಆರ್ಥಿಕತೆ ಉತ್ಪಾದಿಸುವ ಗುರಿಗೆ ಹೆಚ್ಚಿನ ಕೊಡುಗೆ ರಾಜ್ಯ ನೀಡುವ ನಿರೀಕ್ಷೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ರಘುನಾಥ್ ರಾವ್ ಮಲಕಾಪೂರೆ ಮತ್ತು ಹೈಕೋರ್ಟ್ ಸಿಜೆ ಅಲೋಕ್ ಅರಾಧೆ ಉಪಸ್ಥಿತರಿದ್ದರು.

ಇಸ್ಕಾನ್ ಮುಖ್ಯಸ್ಥ ಮಧು ಪಂಡಿತ್ ದಾಸ್, ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಂದ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Tue, 27 September 22