IndiGo flights: ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ ಉದ್ಯಮಿ; ವಿಮಾನ ವ್ಯತ್ಯಯದ ವೀಡಿಯೋ ವೈರಲ್

ಇಂಡಿಗೋ ವಿಮಾನಗಳು ಬೆಂಗಳೂರು ಸೇರಿದಂತೆ ದೇಶಾದ್ಯಂತ 3ನೇ ದಿನವೂ ರದ್ದುಗೊಂಡಿದ್ದು, ಸಿಬ್ಬಂದಿ ಕೊರತೆಯಿಂದ 550ಕ್ಕೂ ಹೆಚ್ಚು ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಿಇಒ ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯವನ್ನೂ ಕಾರಣವೆಂದು ಹೇಳಿದ್ದಾರೆ. ಈ ಬಗ್ಗೆ ಪ್ರಯಾಣಿಸುವ ಮೊದಲು ಎರಡು ಬಾರಿ ಯೋಚಿಸಿ ಎಂದು ಉದ್ಯಮಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

IndiGo flights: ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ  ಉದ್ಯಮಿ;  ವಿಮಾನ ವ್ಯತ್ಯಯದ ವೀಡಿಯೋ ವೈರಲ್
ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ ಉದ್ಯಮಿ

Updated on: Dec 05, 2025 | 11:11 AM

ಬೆಂಗಳೂರು, ಡಿಸೆಂಬರ್ 5: ಇಂಡಿಗೋ ವಿಮಾನಗಳ ಸಂಚಾರದಲ್ಲಿ ಇಂದೂ ವ್ಯತ್ಯಯವಾಗಿದ್ದು (IndiGo Flight), ಬೆಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ 550 ವಿಮಾನಗಳ ಸಂಚಾರ ಏಕಾಏಕಿ ರದ್ದಾಗಿದೆ. ಇಂದಿಗೆ ಸತತ 3 ನೇ ದಿನ ಈ ಅವ್ಯವಸ್ಥೆ ಮುಂದುವರೆದಿದ್ದು, ಸಿಬ್ಬಂದಿಯ ಕೊರೆತೆಯೆ ಈ ಸಮಸ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಇದರ ಹಿನ್ನೆಲೆ ಇನ್‌ಸ್ಟಾಗ್ರಾಮ್‌ನಲ್ಲಿ ಉದ್ಯಮಿ ವಿಥಿಕಾ ಅಗರ್ವಾಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಇಂಡಿಗೋದಲ್ಲಿ ಪ್ರಯಾಣಿಸುವ ಮೊದಲು ಎರಡು ಬಾರಿ ಯೋಚಿಸಿ ಎಂದು ಬರೆದುಕೊಂಡಿದ್ದಾರೆ.

ಉದ್ಯಮಿ ಹಂಚಿಕೊಂಡ ವೀಡಿಯೋ ವೈರಲ್

ಇಂಡಿಗೋ ವಿಮಾನ ವ್ಯತ್ಯಯದ ವೀಡಿಯೋ ಒಂದನ್ನು ಹಂಚಿಕೊಂಡಿರುವ ವಿಥಿಕಾ, ನೀವು ಮುಂದಿನ 24 ರಿಂದ 48 ಗಂಟೆಗಳಲ್ಲಿ ಇಂಡಿಗೋದ ಮೂಲಕ ಪ್ರಯಾಣಿಸಲು ಬಯಸುತ್ತಿದ್ದರೆ ಇನ್ನೆರಡು ಬಾರಿ ಯೋಚನೆ ಮಾಡಿ. ಜೊತೆಗೆ ಪ್ಲಾನ್ ಬಿ ಸಹ ಇಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಅವರು ಹಂಚಿಕೊಂಡ ವೀಡಿಯೋದಲ್ಲಿ ಟರ್ಮಿನಲ್ ಮೂಲಕ ಹಾದು ಹೋಗಿರುವ ಉದ್ದವಾದ ಸರತಿ ಸಾಲನ್ನು ತೋರಿಸುತ್ತಾ, ಇಲ್ಲಿ ಜನರು ವಿಮಾನ ನಿಲ್ದಾಣದಲ್ಲಿ ಆಹಾರ ಪಡೆಯಲು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಏಕೆಂದರೆ ಅವರ ವಿಮಾನಗಳು ಹಾರುತ್ತವೆಯೋ ಅಥವಾ ರದ್ದಾಗಿವೆಯೋ ಎಂದೇ ಅವರಿಗೆ ತಿಳಿಯುತ್ತಿಲ್ಲ.ಈ ಬಗ್ಗೆ ಯಾವುದೇ ಮಾಹಿತಿಯೂ ಬರುತ್ತಿಲ್ಲ. ಈಗಾಗಲೆ ಚೆಕ್ ಇನ್ ಮಾಡಿರುವ ಜನರು ಹೊರಹೋಗಲೂ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ಸ್ಟಾಗ್ರಾಮ್​ನಲ್ಲಿ ಉದ್ಯಮಿ ಹಂಚಿಕೊಂಡ ಪೋಸ್ಟ್

ಸತತ ಮೂರನೇ ದಿನವೂ ಅವ್ಯವಸ್ಥೆ

ಬುಧವಾರ ಕನಿಷ್ಠ 150 ವಿಮಾನಗಳ ರದ್ದತಿಯ ನಂತರ ಗುರುವಾರವಷ್ಟೇ 300 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಂದೂ 550 ವಿಮಾನಗಳ ಸಂಚಾರ ರದ್ದಾಗಿದೆ. ಈ ಬಗ್ಗೆ ಅಧಿಕಾರಿಗಳು ಹೇಳಿದಂತೆ, ಗುರುವಾರದ ರದ್ದತಿಗಳಲ್ಲಿ ದೆಹಲಿಯಿಂದ 33, ಹೈದರಾಬಾದ್‌ನಿಂದ 68, ಮುಂಬೈನಿಂದ 85 ಮತ್ತು ಬೆಂಗಳೂರಿನಿಂದ 73 ವಿಮಾನಗಳು ಸೇರಿವೆ. ಒಂದು ದಿನದ ಮೊದಲು, ದೆಹಲಿಯಲ್ಲಿ 67, ಬೆಂಗಳೂರು 42, ಹೈದರಾಬಾದ್ 40 ಮತ್ತು ಮುಂಬೈ 33 ವಿಮಾನಗಳು ರದ್ದುಗೊಂಡಿದ್ದವು. ಭಾರತದಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು, ಏರ್ ಇಂಡಿಯಾ, ಆಕಾಶ ಏರ್ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಅಮೆಡಿಯಸ್ ಸಾಫ್ಟ್‌ವೇರ್ ಬಳಸುವ ವಿಮಾನಯಾನ ಸಂಸ್ಥೆಗಳು ಮಂಗಳವಾರ ರಾತ್ರಿ ಸುಮಾರು ಒಂದು ಗಂಟೆ ಚೆಕ್-ಇನ್ ವ್ಯವಸ್ಥೆಯ ವೈಫಲ್ಯವನ್ನು ಎದುರಿಸಿದವು.

ಇದನ್ನೂ ಓದಿ IndiGo flights: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಒದ್ದಾಟ

ಕಾರ್ಯಾಚರಣೆಯ ವೈಫಲ್ಯ ಒಪ್ಪಿಕೊಂಡ ಸಿಇಓ

ಇಂಡಿಗೋ ಸಿಇಒ ಕಾರ್ಯಾಚರಣೆಯ ವೈಫಲ್ಯಗಳನ್ನು ಒಪ್ಪಿಕೊಂಡಿದ್ದು, ಸಣ್ಣ ತಂತ್ರಜ್ಞಾನದ ದೋಷಗಳು, ವೇಳಾಪಟ್ಟಿ ಬದಲಾವಣೆಗಳು, ಹವಾಮಾನ ಪರಿಸ್ಥಿತಿಗಳು, ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಮತ್ತು ಹೊಸದಾಗಿ ಬಿಡುಗಡೆಯಾದ ಎಫ್‌ಡಿಟಿಎಲ್ ಮಾನದಂಡಗಳ ಅನುಷ್ಠಾನ ಈ ಎಲ್ಲದರ ಹಿನ್ನೆಲೆ ಈ ಪರಿಸ್ಥಿತಿ ಎದುರಾಗಿದೆ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ. ಪ್ರಯಾಣಿಕರಿಗಾದ ವ್ಯಾಪಕವಾದ ತೊಂದರೆಯನ್ನು ಒಪ್ಪಿಕೊಂಡ ಅವರು, ನಾವು ಸಮಸ್ಯೆಗೊಳಗಾದ ಗ್ರಾಹಕರನ್ನು ಪೂರ್ವಭಾವಿಯಾಗಿ ತಲುಪುತ್ತಿದ್ದೇವೆ. ಅವರ ಸಮಸ್ಯೆ ಕಡಿಮಡ ಮಾಡಲುಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.