ಇರುಳು ಕುರುಡು ಸಮಸ್ಯೆ ಎಂದು ಹಗಲಿನಲ್ಲೇ ಕಿರುತೆರೆ ನಟನ ಮನೆಗೆ ಕನ್ನ ಹಾಕಿದ ಅಂತಾರಾಜ್ಯ ಕಳ್ಳ!

ಬೆಂಗಳೂರಿನಲ್ಲಿ ಇರುಳು ಕುರುಡು ಸಮಸ್ಯೆಯಿದ್ದ ಕಳ್ಳನೊಬ್ಬ ಹಗಲಲ್ಲೇ ಬೀಗ ಹಾಕಿದ ಮನೆಗಳನ್ನು ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕಿರುತೆರೆ ನಟ ಪ್ರವೀಣ್ ಮನೆಯಲ್ಲಿ ಕನ್ನ ಹಾಕಿದ್ದ ಈತ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿಚಾರಣೆ ವೇಳೆ, ಈತ ಅಂತಾರಾಜ್ಯ ಕಳ್ಳನಾಗಿದ್ದು, ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿದ್ದು ಬೆಳಕಿಗೆ ಬಂದಿದೆ.

ಇರುಳು ಕುರುಡು ಸಮಸ್ಯೆ ಎಂದು ಹಗಲಿನಲ್ಲೇ ಕಿರುತೆರೆ ನಟನ ಮನೆಗೆ ಕನ್ನ ಹಾಕಿದ ಅಂತಾರಾಜ್ಯ ಕಳ್ಳ!
ಇರುಳು ಕುರುಡು ಸಮಸ್ಯೆ ಇದೆ ಅಂತಾ ಹಗಲಿನಲ್ಲೇ ಕಿರುತೆರೆ ನಟನ ಮನೆಗೆ ಕನ್ನ ಹಾಕಿದ ಅಂತಾರಾಜ್ಯ ಕಳ್ಳ!
Edited By:

Updated on: Dec 23, 2025 | 12:59 PM

ಬೆಂಗಳೂರು, ಡಿಸೆಂಬರ್ 23: ರಾತ್ರಿ ಮನೆ ಮಂದಿಯೆಲ್ಲಾ ನಿದ್ರೆಗೆ ಜಾರಿದಾಗ ಮನೆಯೊಳಗೆ ನುಗ್ಗಿ ಕನ್ನ ಹಾಕಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಇಲ್ಲೊಬ್ಬ ಕಳ್ಳ ಹಾಡುಗಲೇ ಮನೆಯನ್ನು ದೋಚಿದ ಆಶ್ಚರ್ಯಕರ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಇರುಳು ಕುರುಡು ಸಮಸ್ಯೆಯಿದ್ದ ಕದೀಮನೊಬ್ಬ ಹಗಲೊತ್ತಲ್ಲೇ ಮನೆಗಳಿಗೆ ನುಗ್ಗಿ ಹಣ, ಚಿನ್ನ ದೊಚಿ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬೀಗ ಹಾಕಿದ ಮನೆಯೇ ಟಾರ್ಗೆಟ್

ಮೊಹಮ್ಮದ್ ಖಾನ್ ಬಂಧಿತ ಆರೋಪಿ. ಇರುಳು ಕುರುಡು ಸಮಸ್ಯೆಯಿಂದ ಬಳಲುತ್ತಿರುವ ಈತ ಜೀವನ ನಡೆಸಲು ಆಯ್ದುಕೊಂಡ ವೃತ್ತಿ ಕಳ್ಳತನ. ರಾತ್ರಿ ಕಣ್ಣು ಕಾಣುವುದಿಲ್ಲವೆಂದು ಹಗಲಲ್ಲೇ ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ದೋಚುತ್ತಿದ್ದ. ಬೆಳಗ್ಗೆ ಮನೆಯವರಿಲ್ಲದೆ ಬೀಗ ಹಾಕುವ ಮನೆಗಳೇ ಈತನ ಟಾರ್ಗೆಟ್. ಯಾರೂ ಇಲ್ಲದ ಮನೆಗಳನ್ನು ಹುಡುಕುತ್ತಾ ಏರಿಯಾದಲ್ಲೆಲ್ಲಾ ರೌಂಡ್ ಹಾಕುತ್ತಿದ್ದ ಈತ, ಜೆಪಿನಗರದ ವಾಸಿಯಾಗಿರುವ ಕಿರುತೆರೆ ನಟ ಪ್ರವೀಣ್ ಎನ್ನುವವರ ಮನೆಯಲ್ಲಿಯೂ ಕಳ್ಳತನ ಮಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಂತಾರಾಜ್ಯ ಕಳ್ಳನಾಗಿದ್ದ ಈತನಿಂದ ಲಕ್ಷಗಟ್ಟಲೆ ಬೆಲೆಬಾಳುವ ವಸ್ತುಗಳು ವಶ

ಪ್ರವೀಣ್ ಪತ್ನಿ ಮೇಕಪ್ ಆರ್ಟಿಸ್ಟ್ ಆಗಿದ್ದು, ಇಬ್ಬರೂ ಸೀರಿಯಲ್ ಶೂಟಿಂಗ್ ಹೋದಾಗ ಕಳ್ಳ‌ ಮನೆಗೆ ನುಗ್ಗಿ ತನ್ನ ಕೈಚಳಕ ತೋರಿದ್ದಾನೆ.ಅವರ ಮನೆಯಿಂದ ಸುಮಾರು ಒಂದೂವರೆ ಲಕ್ಷದಷ್ಟು ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮೊಹಮ್ಮದ್ ಖಾನ್ ವಿರುದ್ಧ ಪ್ರವೀಣ್ ಜೆಪಿನಗರ ಠಾಣೆಗೆ ದೂರು ನೀಡಿದ್ದರು. ಕಳ್ಳನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ತಮಿಳುನಾಡು ರಾಜ್ಯಗಳಲ್ಲಿಯೂ ಈತ ಕನ್ನ ಹಾಕಿರುವುದು ತಿಳಿದು ಬಂದಿದೆ. ಒಟ್ಟೂ ಏಳು ಅಂತಾರಾಜ್ಯ ಕಳ್ಳತನ ಪ್ರಕರಣಗಳಿಂದ 46 ಲಕ್ಷ ರೂ. ನಗದು, 65.28 ಲಕ್ಷ ರೂ. ಚಿನ್ನಾಭರಣ ಸೇರಿ, 1 ಕೆಜಿ 550 ಗ್ರಾಂ ಬೆಳ್ಳಿಯ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಜೈಲಿನಿಂದ ಹೊರಬಂದು ಕಳ್ಳತನದ ಪ್ಲ್ಯಾನ್ ಮಾಡಿದ್ರು

ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಪರಿಚಯವಾಗಿದ್ದ ಬಾಲರಾಜ್, ಗೌರವ್ ಹಾಗೂ ಪ್ರವೀಣ್, ಜೈಲಿನಿಂದ ರಿಲೀಸ್ ಆದ ನಂತರ ಮೂವರೂ ಸೇರಿ ಕಳ್ಳತನ ಮಾಡುವ ಹೊಂಚು ಹಾಕಿದ್ದರು. ಅದರಂತೆಯೇ ಸಿದ್ದಾಪುರ ವ್ಯಾಪ್ತಿಯ ವಿವಿಧ ಮನೆಗಳಲ್ಲಿ ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಮೂವರನ್ನು ಪೊಲೀಸರು ಬಂಧಿಸಿದ್ದು, ಸುಮಾರು 25 ಲಕ್ಷ ರೂ. ಮೌಲ್ಯದ 257 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.